ಶಾಲೆಯಿಂದ ಮನೆಗೆ ಹೊರಟಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಕ್ಯಾಬ್ ಚಾಲಕ
ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯ ಮೇಲೆ ಕ್ಯಾಬ್ ಚಾಲಕನೊಬ್ಬ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್ನಲ್ಲಿ ನಡೆದಿದೆ. 29 ವರ್ಷದ ಕ್ಯಾಬ್ ಚಾಲಕ 11 ವರ್ಷದ ಬಾಲಕಿಯನ್ನು ಹತ್ಯೆಮಾಡಿದ್ದಾನೆ. ಆರೋಪಿಯ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಏಪ್ರಿಲ್ 14 ರಂದು ಪೊಲೀಸರು ಕಾಣೆಯಾದ ಮೂರು ದಿನಗಳ ನಂತರ ಬಾಲಕಿಯ ಶವವನ್ನು ಪತ್ತೆ ಮಾಡಲಾಗಿದೆ.
ಬಾಲಕಿ ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಆರೋಪಿ ಲಿಫ್ಟ್ ನೀಡುತ್ತೇನೆ ಎಂದು ಕಾರಿಗೆ ಹತ್ತಿಸಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೆಟ್ರೋಲ್ ಬಂಕ್ ಬಳಿ ತಿಂಡಿ ಹಾಗೂ ಜ್ಯೂಸ್ ಖರೀದಿಸಿದ್ದ. ನಂತರ ಹತ್ತಿರದ ಕಾಡಿಗೆ ಕರೆದೊಯ್ದು ದುಷ್ಕೃತ್ಯ ಮೆರೆದಿದ್ದಾನೆ.
ಆರೋಪಿಯನ್ನು ನೇಣಿಗೇರಿಸಬೇಕು ಎಂದು ಬಾಲಕಿಯ ತಾಯಿ ಆಗ್ರಹಿಸಿದ್ದಾರೆ. ನನ್ನ ಮಗಳು ಜೀವನ್ಮರಣ ಹೋರಾಟ ನಡೆಸಿದ್ದಾಳೆ. ಸಾಯುವ ಮುನ್ನ ಆಕೆಗೆ ಚಿತ್ರಹಿಂಸೆ ನೀಡಲಾಗಿತ್ತು. ಆರೋಪಿಗಳಿಗೂ ಅದೇ ಶಿಕ್ಷೆ ನೀಡಬೇಕು. ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿದರೆ ನಾನು ಆತನಿಗೆ ಅದೇ ರೀತಿ ಹಿಂಸೆ ನೀಡುತ್ತೇನೆ ಎಂದು ತಾಯಿ ಕಣ್ಣೀರು ಹಾಕಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.