ಮ್ಯಾಕ್ಸ್ ವೆಲ್ ಮತ್ತು ಡುಪ್ಲೆಸಿಸ್ ಸಿಡಿಲಬ್ಬರದ ಬಳಿಕವೂ CSK ವಿರುದ್ಧ ಕೇವಲ 8 ರನ್ ಗೆ ಮಂಡಿಯೂರಿದ RCB!
ಬೆಂಗಳೂರು (ಏ.17): ಆರ್‌ಸಿಬಿಯ ದಯನೀಯ ಬೌಲಿಂಗ್ ಮುಂದೆ ಚೆನ್ನೈ ಪೇರಿಸಿದ್ದು ಬರೋಬ್ಬರಿ 226 ರನ್. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್‌ಅನ್ನು ಬೆಂಡೆತ್ತಿದ ಆರ್‌ಸಿಬಿ ತಂಡ ತನ್ನ ಈವರೆಗಿನ ಅತ್ಯಂತ ಸ್ಮರಣೀಯ ಗೆಲುವು ಸಾಧಿಸುವ ಹಾದಿಯಲ್ಲಿರುವಾಗ ಧೋನಿಯ ಚಾಣಾಕ್ಷ ನಾಯಕತ್ವ ತಂಡದ ದಿಕ್ಕು ತಪ್ಪಿಸಿತು. ಇದರಿಂದಾಗಿ ಗೆಲುವಿನ ಹಾದಿಯಲ್ಲಿದ್ದ ಆರ್‌ಸಿಬಿ, ಕೊನೇ ಹಂತದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು 8 ರನ್‌ಗಳ ಸೋಲು ಕಂಡಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಫಾಫ್ ಡು ಪ್ಲೆಸಿಸ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಕಂಡು ಚೆನ್ನೈ ವಿರುದ್ಧ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಕೊನೆಗೆ ಆಗಿದ್ದು ನಿರಾಸೆ ಮಾತ್ರ. ಮ್ಯಾಕ್ಸ್‌ವೆಲ್ ಹಾಗೂ ಡು ಪ್ಲೆಸಿಸ್ ಅವರ ಹೋರಾಟ ಆಟ ವ್ಯರ್ಥವಾದರೆ, 227 ರನ್ ಚೇಸ್ ಮಾಡಬೇಕಿದ್ದ ಆರ್‌ಸಿಬಿ 8 ವಿಕೆಟ್‌ಗೆ 218 ರನ್ ಬಾರಿಸಿ ಸೋಲು ಕಂಡಿತು.
ಚೇಸಿಂಗ್ ಆರಂಭಿಸಿದ ಆರ್‌ಸಿಬಿಯ ಬ್ಯಾಟಿಂಗ್ ಅಷ್ಟೇನೂ ಉತ್ತಮವಾಗಿರಲಿಲ್ಲ. ಉತ್ತಮ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ ಅಗತ್ಯ ಸಂದರ್ಭದಲ್ಲಿ ಮತ್ತೊಮ್ಮೆ ಕೈಕೊಟ್ಟರು. ಕೇವಲ 4 ಎಸೆತ ಆಡಿದ ಕಿಂಗ್ ಕೊಹ್ಲಿ ಕೇವಲ 1 ಬೌಂಡರಿಯೊಂದಿಗೆ 6 ರನ್ ಬಾರಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲಿಯೇ 5 ಎಸೆತಗಳಲ್ಲಿ ಶೂನ್ಯ ಸುತ್ತಿದ ಮಹೀಪಾಲ್ ಲೋಮ್ರರ್ ಔಟಾದಾಗ ಆರ್‌ಸಿಬಿ 15 ರನ್ ಬಾರಿಸಿತ್ತು. ಮತ್ತೊಂದು ದೊಡ್ಡ ಸೋಲು ತಂಡದ ಮೇಲೆ ತೂಗಾಡಲು ಆರಂಭಿಸಿತ್ತು.
ಪಂದ್ಯ ಚಿತ್ರಣವನ್ನೇ ಬದಲಿಸಿದ ಮ್ಯಾಕ್ಸ್‌ವೆಲ್-ಫಾಪ್: 15 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ಜೊತೆಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಫಾಫ್ ಡು ಪ್ಲೆಸಿಸ್ ಅಕ್ಷರಶಃ ಚೆನ್ನೈ ಬೌಲಿಂಗ್‌ಅನ್ನು ಚಿಂದಿ ಉಡಾಯಿಸಿದರು. ಕೇವಲ 61 ಎಸೆತ ಎದುರಿಸಿದ ಈ ಜೋಡಿ ಬರೋಬ್ಬರಿ 126 ರನ್ ಪೇರಿಸಿತು. ಇದರಲ್ಲಿ ಫಾಫ್ ಡು ಪ್ಲೆಸಿಸ್ ಪಾಲು 25 ಎಸೆತಗಳ 49 ರನ್ ಆಗಿದ್ದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಪಾಲು 36 ಎಸೆತಗಳಲ್ಲಿ 76 ರನ್. ತಮ್ಮ 36 ಎಸೆತಗಳ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ಮ್ಯಾಕ್ಸ್‌ವೆಲ್ 13ನೇ ಓವರ್‌ನ ಮೊದಲ ಎಸೆತದಲ್ಲಿ ಔಟಾದಾಗ ಆರ್‌ಸಿಬಿ 141 ರನ್ ಬಾರಿಸಿತ್ತು.
ಗೆಲುವು ಇನ್ನೇನು ಸುಲಭಸಾಧ್ಯ ಎನ್ನುವ ಹಾದಿಯಲ್ಲಿತ್ತು. ಆದರೆ, ಈ ಮೊತ್ತಕ್ಕೆ 18 ರನ್ ಕೂಡಿಸುವ ವೇಳೆಗೆ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳಿದ್ದ 62 ರನ್ ಬಾರಿಸಿದ್ದ ಪ್ಲೆಸಿಸ್ ಕೂಡ ಔಟಾದಾಗ ಆರ್‌ಸಿಬಿಯ ದಿಕ್ಕು ತಪ್ಪಿತು. ಕೆಳಹಂತದಲ್ಲಿ ಬಂದ ಯಾವೊಬ್ಬ ಆಟಗಾರ ಕೂಡ ಆರ್‌ಸಿಬಿಯ ಗೆಲುವಿಗೆ ದೊಡ್ಡ ಮಟ್ಟದ ಶ್ರಮಪಡಲಿಲ್ಲ. ಈ ಹಂತದಲ್ಲಿ ದೊಡ್ಡ ಜವಾಬ್ದಾರಿ ತೆಗೆದುಕೊಂಡು ಫಿನಿಶರ್ ಆಗಬೇಕಿದ್ದ ಡಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ಗಳಿದ್ದ 28 ರನ್ ಬಾರಿಸಿ ಔಟಾದರು.