ಅಣ್ಣಾಮಲೈಗೆ 500 ಕೋಟಿ ದಂಡ ಕಟ್ಟುವಂತೆ ನೋಟಿಸ್
ಚೆನ್ನೈ: ಇತ್ತೀಚೆಗೆ ಡಿಎಂಕೆಯ 27 ನಾಯಕರು 2.24 ಲಕ್ಷ ಕೋಟಿ ರು. ಹೆಚ್ಚು ಆಸ್ತಿ ಹೊಂದಿದ್ದಾರೆ. ಇದು ತಮಿಳುನಾಡು ಜಿಡಿಪಿಯ ಶೇ.10ರಷ್ಟು. ಇದರಲ್ಲಿ ಅಪಾರ ಅಕ್ರಮ ಸಂಪಾದನೆ ಇದ್ದು, ಇದರ ವಿರುದ್ಧ ಶೀಘ್ರ ಸಿಬಿಐ ಮೊರೆ ಹೋಗುವೆ ಎಂದಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ ಡಿಎಂಕೆ ಕಾನೂನು ಸಮರ ಅರಂಭಿಸಿದೆ. ‘ಅಣ್ಣಾಮಲೈ ಕ್ಷಮೆ ಕೇಳಬೇಕು ಹಾಗೂ ಮಾಡಿದ ಆರೋಪಗಳಿಗೆ 500 ಕೋಟಿ ರು. ಪರಿಹಾರ ಕಟ್ಟಿ ಕೊಡಬೇಕು’ ಎಂದು ನೋಟಿಸ್ ಜಾರಿ ಮಾಡಿದೆ.
ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ( SR Bharati) ಅವರು 10 ಪುಟಗಳ ನೋಟಿಸ್ ಅನ್ನು ಅಣ್ಣಾಮಲೈಗೆ ನೀಡಿದ್ದು, ‘ಡಿಎಂಕೆ ನಾಯಕರು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆಂದು ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 200 ಕೋಟಿ ರು. ಲಂಚ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅಣ್ಣಾಮಲೈ (Annamalai) ಮಾಡಿದ ಆರೋಪ ಸುಳ್ಳು. ಮಾನಹಾನಿಕರ ಹಾಗೂ ಕಪೋಲಕಲ್ಪಿತ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಅಣ್ಣಾಮಲೈ ಮಾಡಿದ ಆರೋಪಕ್ಕೆ ಪರಿಹಾರವಾಗಿ ಸ್ಟಾಲಿನ್ (Stalin) ಅವರಿಗೆ 5 ಕೋಟಿ ರು.ಗಳನ್ನು 48 ತಾಸಿನಲ್ಲಿ ನೀಡಬೇಕು. ಈ ಹಣವನ್ನು ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಉದ್ದೇಶವನ್ನು ಸ್ಟಾಲಿನ್ ಹೊಂದಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದನ್ನು ಮಾಡದೇ ಹೋದರೆ ಸೂಕ್ತ ಕಾನೂನು ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದು ನೋಟಿಸ್‌ನಲ್ಲಿ ಡಿಎಂಕೆ ಹೇಳಿದೆ.