ನಾಲ್ಕು ದಶಕಗಳ ಬಿಜೆಪಿಯೊಂದಿಗಿನ ನಂಟು ಕಡಿದುಕೊಳ್ಳಲು ತೀರ್ಮಾನ- ಇಂದು 'ಕೈ' ಹಿಡಿಯಲಿರುವ ಕಮಲ ನಾಯಕ
ಬೆಂಗಳೂರು: ಸುಮಾರು ನಾಲ್ಕು ದಶಕಗಳ ಬಿಜೆಪಿಯೊಂದಿಗಿನ ನಂಟು ಕಡಿದುಕೊಳ್ಳಲು ತೀರ್ಮಾನಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಶಿರಸಿಗೆ ತೆರಳಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಖುದ್ದಾಗಿ ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಸಂಜೆ ಬೆಂಗಳೂರಿಗೆ ಆಗಮಿಸಿದ ಅವರು ತಡರಾತ್ರಿವರೆಗೂ ಕಾಂಗ್ರೆಸ್ ನಾಯಕರೊಂದಿಗೆ ಸತತ ಸಮಾಲೋಚನೆ ನಡೆಸಿದರು.
ಶೆಟ್ಟರ್ ಅವರ ಬೀಗರಾದ ಗಣೇಶ್ ಶಾಮನೂರು (Ganesh Shamanoor)ಅವರ ನಿವಾಸದಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರೊಂದಿಗೆ ಸಭೆ ನಡೆಯಿತು. ಸಭೆಯ ಮಧ್ಯೆಯೇ ಶೆಟ್ಟರ್ ಅವರು ದೂರವಾಣಿ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೂ ಚರ್ಚೆ ನಡೆಸಿದರು. ಬಳಿಕ ಕಾಂಗ್ರೆಸ್ ಸೇರ್ಪಡೆ ತೀರ್ಮಾನ ಕೈಗೊಂಡರು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ 8.15ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪತ್ರಿಕಾಗೋಷ್ಠಿ ಕರೆಯಲಾಗಿದೆ. ಈ ವೇಳೆಯೇ ಶೆಟ್ಟರ್ ಅವರು ಸೇರ್ಪಡೆಯಾಗಬಹುದು ಅಥವಾ ಶೆಟ್ಟರ್ ಸೇರ್ಪಡೆಯನ್ನು ಪ್ರಕಟಿಸಬಹುದು. ಇದೇ ವೇಳೆ ಬೆಂಗಳೂರಿನಲ್ಲಿ ಸಾಂಕೇತಿಕವಾಗಿ ಸೇರ್ಪಡೆಯಾಗಿ ಬಳಿಕ ಹುಬ್ಬಳ್ಳಿಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಅಧಿಕೃತವಾಗಿ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದಕ್ಕೂ ಮೊದಲು ಶೆಟ್ಟರ್ ಅವರು ತಮ್ಮ ಆಪ್ತರ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಪತ್ರವನ್ನು ರವಾನಿಸಿದ್ದರು ಎಂದು ಮೂಲಗಳು ತಿಳಿಸಿವೆ.