ಲಖನೌ ಸೂಪರ್‌ಜೈಂಟ್ಸ್ ಸವಾಲಿಗೆ ಸಜ್ಜಾದ ಆರ್‌ಸಿಬಿ
ಬೆಂಗಳೂರು(ಏ.10): ಮುಂಬೈ ವಿರುದ್ಧದ ದೊಡ್ಡ ಗೆಲುವಿನೊಂದಿಗೆ 16ನೇ ಆವೃತ್ತಿ ಐಪಿಎಲ್ನಲ್ಲಿ ಶುಭಾರಂಭ ಮಾಡಿದ್ದ ಆರ್‌ಸಿಬಿ, ಕಳೆದ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಹೀನಾಯವಾಗಿ ಸೋತಿದ್ದರಿಂದ ನೆಟ್ ರನ್‌ರೇಟ್ ಪಾತಳಕ್ಕೆ ಕುಸಿದಿದೆ. ತವರಿಗೆ ವಾಪಸಾಗಿರುವ ತಂಡ ಮುಂದಿನ ಒಂದು ವಾರದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3 ಪಂದ್ಯಗಳನ್ನಾಡಲಿದ್ದು, ಮೂರರಲ್ಲೂ ಗೆಲ್ಲುವ ಮೂಲಕ ಆರಂಭಿಕ ಹಂತದಲ್ಲೇ ಪ್ಲೇ-ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿ ನಿಲ್ಲಲು ಎದುರು ನೋಡುತ್ತಿದೆ.
ಸೋಮವಾರ ಆರ್‌ಸಿಬಿಗೆ ಲಖನೌ ಸೂಪರ್ ಜೈಂಟ್ಸ್ ಸವಾಲು ಎದುರಾಗಲಿದ್ದು, ಮೊದಲ ಪಂದ್ಯದಂತೆಯೇ ದೊಡ್ಡ ಜಯ ಸಾಧಿಸಲು ಎದುರು ನೋಡುತ್ತಿದೆ. ಮತ್ತೊಂದೆಡೆ ಲಖನೌ, 3ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಕಾಯುತ್ತಿದೆ.
ಡೆತ್ ಬೌಲಿಂಗ್ ತಲೆಬಿಸಿ: ಆರ್ಸಿಬಿಯ ಡೆತ್ ಬೌಲಿಂಗ್ ಸಮಸ್ಯೆ ಈ ಬಾರಿಯೂ ಮುಂದುವರಿದಿದ್ದು, ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳದಿದ್ದರೆ ಗೆಲುವು ಕಷ್ಟ. ಮುಂಬೈ ವಿರುದ್ಧ ಆರಂಭದಲ್ಲಿ ಮೇಲುಗೈ ಸಾಧಿಸಿದ್ದರೂ ಕೊನೆ 5 ಓವರ್ಗಳಲ್ಲಿ 69 ರನ್ ಬಿಟ್ಟುಕೊಟ್ಟಿತ್ತು. ಕೆಕೆಆರ್ ವಿರುದ್ಧ ಮೊದಲ 11 ಓವರ್‌ಗಳನ್ನು ಅತ್ಯುತ್ತಮವಾಗಿಯೇ ನಿಭಾಯಿಸಿದ್ದ ಆರ್‌ಸಿಬಿ ಬಳಿಕ ಮಂಕಾಗಿತ್ತು. ಕೊನೆ 9 ಓವರಲ್ಲಿ 117 ರನ್ ಚಚ್ಚಿಸಿಕೊಂಡಿತ್ತು. ಟಾಪ್ಲಿ, ಹೇಜಲ್ವುಡ್ ಅನುಪಸ್ಥಿತಿಯಲ್ಲಿ ಮೊಹಮದ್ ಸಿರಾಜ್, ಹರ್ಷಲ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿದ್ದರೂ ಡೆತ್ ಓವರ್ಗಳಲ್ಲಿ ಇಬ್ಬರೂ ವಿಫಲರಾಗುತ್ತಿದ್ದಾರೆ. ಮಧ್ಯಮ ವೇಗಿ ವೇಯ್ನ್ ಪಾರ್ನೆಲ್ ಅವಕಾಶದ ನಿರೀಕ್ಷೆಯಲ್ಲಿದ್ದು, ಬ್ಯಾಟಿಂಗ್ ವಿಭಾಗದಲ್ಲೂ ಶಕ್ತಿ ತುಂಬಬಲ್ಲರು.
ಇದೇ ವೇಳೆ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ-ಡು ಪ್ಲೆಸಿಸ್ ಹೊರತುಪಡಿಸಿ ಇತರೆ ಬ್ಯಾಟರ್ಗಳಿಂದ ರನ್ ಹರಿಯುತ್ತಿಲ್ಲ. ಕೋಲ್ಕತಾ ವಿರುದ್ಧ ಸ್ಪಿನ್ ದಾಳಿಯನ್ನು ಎದುರಿಸಲು ತೀವ್ರ ವೈಫಲ್ಯ ಅನುಭವಿಸಿದ್ದು, ಅಮಿತ್ ಮಿಶ್ರಾ, ಬಿಷ್ಣೋಯ್, ಕೃನಾಲ್ ಪಾಂಡ್ಯ ಅವರಂತಹ ಸ್ಪಿನ್ನರ್ಗಳನ್ನು ಹೊಂದಿರುವ ಲಖನೌ ವಿರುದ್ಧ ಸಮರ್ಥ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ. ಮ್ಯಾಕ್ಸ್‌ವೆಲ್, ಬ್ರೇಸ್ವೆಲ್, ಶಾಬಾಜ್ ಅಹ್ಮದ್ ಆಲ್ರೌಂಡ್ ಪ್ರದರ್ಶನ ನಿರ್ಣಾಯಕ ಎನಿಸಿಕೊಳ್ಳಬಹುದು. ಕಾರ್ತಿಕ್ ಕೂಡಾ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ.
ಮತ್ತೊಂದೆಡೆ ಲಖನೌ ಆಲ್ರೌಂಡ್ ಪ್ರದರ್ಶನದ ಮೂಲಕವೇ ಟೂರ್ನಿಯಲ್ಲಿ ಗಮನ ಸೆಳೆಯುತ್ತಿದೆ. ಕೈಲ್ ಮೇಯರ್ಸ್ ಪ್ರಚಂಡ ಲಯದಲ್ಲಿದ್ದು, ಡಿ ಕಾಕ್ ಕೂಡಾ ಈ ಪಂದ್ಯದಲ್ಲಿ ಆಡಬಹುದು. ಆದರೆ ಕೆ.ಎಲ್.ರಾಹುಲ್, ಮಾರ್ಕಸ್ ಸ್ಟೋಯ್ನಿಸ್ ಸ್ಥಿರತೆ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ. ಕೆ.ಗೌತಮ್, ದೀಪಕ್ ಹೂಡಾ ಬ್ಯಾಟಿಂಗ್ ಜೊತೆ ಬೌಲಿಂಗ್ನಲ್ಲೂ ತಂಡಕ್ಕೆ ಅಗತ್ಯ ಕೊಡುಗೆ ನೀಡುತ್ತಿದ್ದಾರೆ.
ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, 8-9 ಆಯ್ಕೆಗಳನ್ನು ಇಟ್ಟುಕೊಂಡು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. 3 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿರುವ ಬಿಷ್ಣೋಯ್ಗೆ ಚಿಕ್ಕ ಬೌಂಡರಿಗಳನ್ನು ಹೊಂದಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ನಿಯಂತ್ರಿಸುವುದು ಸವಾಲಾಗಬಹುದು. ಆದರೂ ವಿಕೆಟ್‌ಗಳಿಗೆ ನಾಯಕ ರಾಹುಲ್, ಬಿಷ್ಣೋಯ್ ಮೇಲೆಯೇ ಹೆಚ್ಚು ಅವಲಂಬಿತರಾದರೆ ಅಚ್ಚರಿಯಿಲ್ಲ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಪ್ರಮುಖ ವೇಗಿ ಮಾರ್ಕ್ ವುಡ್ ಈ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಗಾಯಗೊಂಡಿದ್ದ ಆವೇಶ್ ಖಾನ್ ಭಾನುವಾರ ನೆಟ್ಸ್‌ನಲ್ಲಿ ಬೌಲ್ ಮಾಡಿದ್ದು, ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.
ಒಟ್ಟು ಮುಖಾಮುಖಿ: 02
ಆರ್‌ಸಿಬಿ: 02
ಲಖನೌ: 00
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಶಾಬಾಜ್ ಅಹಮ್ಮದ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್‌ದೀಪ್, ಮೊಹಮ್ಮದ್ ಸಿರಾಜ್.
ಲಖನೌ: ಕೈಲ್ ಮೇಯರ್ಸ್, ಕೆ ಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಕೆ.ಗೌತಮ್, ಆಯುಷ್ ಬದೋನಿ, ಜಯದೇವ್ ಉನಾದ್ಕತ್, ರವಿ ಬಿಷ್ಣೋಯ್, ಮಾರ್ಕ್ ವುಡ್.
ಪಂದ್ಯ: ಸಂ.7.30ಕ್ಕೆ,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಬ್ಯಾಟಿಂಗ್ ಸ್ನೇಹಿ ಎನಿಸಿಕೊಂಡಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ನಲ್ಲಿ ಮತ್ತೊಮ್ಮೆ ರನ್ ಮಳೆ ಹರಿಯುವ ನಿರೀಕ್ಷೆ ಇದೆ. ಇಲ್ಲಿ ದೊಡ್ಡ ಮೊತ್ತ ಕಲೆಹಾಕಿದರೂ ರಕ್ಷಿಸಿಕೊಳ್ಳುವುದು ಕಷ್ಟ. ಹೀಗಾಗಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.