ಒಳ ಉಡುಪಲ್ಲಿ 2.28 ಕೇಜಿ ಚಿನ್ನದ ಬಿಸ್ಕತ್ ಸಾಗಿಸಲು ಯತ್ನ: ಮೂವರ ಬಂಧನ
ಬೆಂಗಳೂರು (ಏ.10): ತಮ್ಮ ಒಳ ಉಡುಪಿನಲ್ಲಿ 2.28 ಕೇಜಿ ಚಿನ್ನ ಅಡಗಿಸಿಟ್ಟುಕೊಂಡು ಅಕ್ರಮವಾಗಿ ಬೆಂಗಳೂರಿಗೆ ತರಲು ಯತ್ನಿಸಿದ್ದ ಮೂವರು ವಿದೇಶಿ ಪ್ರಜೆಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಈ ಮೂವರು ಮಲೇಷಿಯಾ ದೇಶದ ಪ್ರಜೆಗಳಾಗಿದ್ದು, ಆರೋಪಿಗಳು ಶನಿವಾರ ದುಬೈಯಿಂದ ನಗರಕ್ಕೆ ವಿಮಾನದಲ್ಲಿ ಆಗಮಿಸಿದ್ದರು. ಆಗ ಪ್ರಯಾಣಿಕರ ನಡವಳಿಕೆಯಲ್ಲಿ ಶಂಕೆಗೊಂಡ ಕಸ್ಟಮ್ಸ್ ಅಧಿಕಾರಿಗಳು, ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಒಳ ಉಡುಪಿನಲ್ಲಿ ಚಿನ್ನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ದುಬೈನಿಂದ ಅಕ್ರಮವಾಗಿ ಬೆಂಗಳೂರಿಗೆ ಆರೋಪಿಗಳು ಚಿನ್ನ ಸಾಗಿಸುತ್ತಿದ್ದರು. ಇವರಲ್ಲಿ ಒಬ್ಬಾತ 3 ಚಿನ್ನದ ಬಿಸ್ಕೆತ್‌ಗಳು ಹಾಗೂ ಮತ್ತಿಬ್ಬರು ಚಿನ್ನದ ಪೇಸ್ಟನ್ನು ಒಳ ಉಡುಪಿನಲ್ಲಿ ಬಚ್ಚಿಟ್ಟಿಕೊಂಡಿದ್ದರು. ಕೆಐಎಗೆ ಬಂದ ಆರೋಪಿಗಳನ್ನು ಲೋಹ ಪರಿಶೋಧಕದಲ್ಲಿ ಪರಿಶೀಲಿಸಿದಾಗ ಒಳ ಉಡುಪಿನಲ್ಲಿ ಲೋಹ ಪತ್ತೆಯಾಗಿದೆ. ಆಗ ಈ ಮೂವರನ್ನು ವಶಕ್ಕೆ ಪಡೆದು ಪ್ರತ್ಯೇಕವಾಗಿ ಶೋಧಿಸಿದಾಗ .1.33 ಕೋಟಿ ಮೌಲ್ಯದ 2.28 ಕೇಜಿ ಚಿನ್ನ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ: ಯಲ್ಲಾಪುರದಾ ಶಾರದಾ ಗಲ್ಲಿಯಲ್ಲಿ ಮನೆಯ ಮುಂದೆ ನಿಲ್ಲಿಸಿಟ್ಟಿದ್ದ ಇನ್ನೊವಾ ಕಾರ್ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಮಂಗಳೂರಿನ ಕಂಕನಾಡಿಯಲ್ಲಿ ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರು ಸುರತ್ಕಲ್ ಸುರಿಂಜೆ ಜುಮ್ಮಾ ಮಸೀದಿ ಹತ್ತಿರ ನಿವಾಸಿ ಕಾರ್ ರಿಸೇಲ್ ವ್ಯಾಪಾರಿ ಮಹ್ಮದ ಸಾಹೀಲ… ಶೇಖ್ ಮಹ್ಮದ (21), ಮಂಗಳೂರು ಸುರತ್ಕಲ್ ಚೋಕುಬೆಟ್ಟು ಜುಮ್ಮಾ ಮಸೀದಿ ಹತ್ತಿರದ ನಿವಾಸಿ, ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಮಹ್ಮದ ಮುಸ್ತಪಾ ಯಾನೆ ಅಪ್ಪು ಅಬ್ದುಲ್ ಹಮೀದ್(23) ಹಾಗೂ ಮಂಗಳೂರು ಸುರತ್ಕಲ್ ಗುಡ್ಡೆಕೊಪ್ಪಲು ಇಡ್ಡಿಯಾ ನಿವಾಸಿ ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಮೊಹ್ಮದ ಅಬ್ದುಲ್ ಹಮೀದ್(27) ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಏಪ್ರೀಲ್ 2 ರಂದು ಯಲ್ಲಾಪುರ ಪಟ್ಟಣದ ಶಾರದಾಗಲ್ಲಿ ನಿವಾಸಿ ವ್ಯವಹಾರ ಮಾಡಿಕೊಂಡಿರುವ ಮೊಹಮ್ಮದ ಹುಸೇನ ಶಮಶುದ್ದೀನ್ ಶೇಖ್ (38) ರವರ ಮನೆಯ ಮುಂದೆ ರಸ್ತೆಯ ಪಕ್ಕ ನಿಲ್ಲಿಸಿಟ್ಟಿದ್ದ ಬಿಳಿ ಬಣ್ಣದ ಇನ್ನೋವಾ ಕಾರ್(ನೋಂದಣಿ ಸಂಖ್ಯೆ ಕೆಎ 19, ಪಿ7012) ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಏ. 4 ರಂದು ಯಲ್ಲಾಪುರ ಪೊಲೀಸ್ ಠಾಣೆಗೆ ಮೊಹಮ್ಮದ ಶೇಖ ನೀಡಿದ ದೂರನ್ನು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಏ. 8 ರಂದು ಮಂಗಳೂರಿನ ಕಂಕನಾಡಿಯಲ್ಲಿ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿ ಆರೋಪಿಗಳಿಂದ ಕಳ್ಳತನ ಮಾಡಿದ ಇನ್ನೋವಾ ಕಾರ್ ಹಾಗೂ ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ ಪಾರ್ಚೂನ್ ಕಾರು ಎರಡು ಕಾರಿನ ಒಟ್ಟು ಮೌಲ್ಯ 12 ಲಕ್ಷ 50 ಸಾವಿರ ಬೆಲೆಯ ಸ್ವತ್ತನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದೆ.
ಉತ್ತರಕನ್ನಡ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ. ಶಿರಸಿ ಪೊಲೀಸ ಉಪಾಧೀಕ್ಷಕ ಗಣೇಶ ಕೆ.ಎಲ್ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸ್ ಇನ್ಸಪೆಕ್ಟರ್ ರಂಗನಾಥ ನೀಲಮ್ಮನವರ, ಪಿ.ಎಸ್.ಐಗಳಾದ ರವಿ ಗುಡ್ಡಿ, ಸುನೀಲ ಹುಲ್ಲೊಳ್ಳಿ, ಮಂಜುನಾಥ ಪಾಟೀಲ, ಲತಾ ಕೆ.ಎನ್ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ ಶಪೀ, ಗಜಾನನ ನಾಯ್ಕ, ಗಿರೀಶ ಲಮಾಣಿ, ಪರಶುರಾಮ ಕಾಳೆ ಇವರು ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಕರಣವನ್ನು ಪತ್ತೆ ಮಾಡಿದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಉತ್ತರ ಕನ್ನಡ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ, ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.