IPL 2023: ರಾಹುಲ್ ತ್ರಿಪಾಠಿ ಮಿಂಚಿನಾಟ, ಟೂರ್ನಿಯಲ್ಲಿ ಮೊದಲ ಗೆಲುವಿನ ಸಿಹಿಯುಂಡ ಸನ್‌ರೈಸರ್ಸ್ ಹೈದರಾಬಾದ್
ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ಪಂಜಾಬ್- ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಸನ್ ರೈಸರ್ಸ್ ತಂಡ ಪಂಜಾಬ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 143 ರನ್ ಗಳಿಗೆ ಕಟ್ಟಿ ಹಾಕಿತು. ಶಿಖರ್ ಧವನ್ (66 ಎಸೆತಗಳಲ್ಲಿ 99) ಏಕಾಂಗಿ ಹೋರಾಟದ ಪರಿಣಾಮವಾಗಿ ಪಂಜಾಬ್ ತಂಡ 143 ರನ್ ಗಳಿಸಲು ಸಾಧ್ಯವಾಯಿತು. ಧವನ್ ಹೊರತುಪಡಿಸಿದರೆ ಸ್ಯಾಮ್ ಕರ್ರನ್ 22 ರನ್ ಗಳನ್ನು ಗಳಿಸಿದ್ದು ಹೊರತುಪಡಿಸಿದರೆ ಬಹುತೇಕ ಉಳಿದ ಎಲ್ಲಾ ಬ್ಯಾಟ್ಸ್ ಮನ್ ಗಳೂ 2 ಅಂಕಿ ರನ್ ಗಳಿಸಲು ಸಾಧ್ಯವಾಗದೇ ವಿಫಲರಾದರು.
ಹೈದರಾಬಾದ್ ತಂಡದ ಪರ ಮಯಾಂಕ್ ಮಾರ್ಕಾಂಡೆ 15 ರನ್ ನೀಡಿ 4 ವಿಕೆಟ್ ಗಳಿಸಿ ಅತ್ಯುತ್ತಮ ಬೌಲರ್ ಎನಿಸಿದರು. ಉಮ್ರನ್ ಮಲೀಕ್ 32 ರನ್ ನೀಡಿ 2 ವಿಕೆಟ್ ಗಳಿಸಿದರೆ, ಭುವನೇಶ್ವರ್ ಕುಮಾರ್ 33 ರನ್ ನೀಡಿ 1 ವಿಕೆಟ್, ಮಾರ್ಕೊ ಜಾನ್ಸೆನ್ 16 ರನ್ ನೀಡಿ 2 ವಿಕೆಟ್ ಗಳಿಸಿದರು.
ಪಂಜಾಬ್ ನೀಡಿದ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಆರಂಭದಲ್ಲೇ ಹ್ಯಾರಿ ಬ್ರೂಕ್ (14 ಎಸೆತಗಳಲ್ಲಿ 13 ರನ್) ವಿಕೆಟ್ ಉರುಳಿದ್ದು ಅಘಾತ ಉಂಟುಮಾಡಿತ್ತು.
ಮತ್ತೋರ್ವ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 20 ಎಸೆತಗಳಲ್ಲಿ 21 ರನ್ ಗಳಿಸಿದರೆ, ರಾಹುಲ್ ತ್ರಿಪಾಟಿ 48 ಎಸೆತಗಳಲ್ಲಿ 74 ರನ್ ಗಳಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಶಿಖರ್ ಧವನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಈ ಐಪಿಎಲ್ ಸೀಸನ್ ನಲ್ಲಿ ಹೈದರಾಬಾದ್ ತಂಡದ ಮೊದಲ ಗೆಲುವು ಇದಾಗಿದೆ.
ಶಿಖರ್ ಧವನ್ ಏಕಾಂಗಿ ಹೋರಾಟ: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದೆಡೆ ನಾಯಕನ ಆಟವಾಡಿದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಕೆಚ್ಚೆದೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಧವನ್ 66 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 99 ರನ್ ಬಾರಿಸಿ ಮಿಂಚಿದರು. ಪಂಜಾಬ್ ಕಿಂಗ್ಸ್ ತಂಡದ ಪರ ಧವನ್(99*) ಹಾಗೂ ಸ್ಯಾಮ್ ಕರ್ರನ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಇದು ಪಂಜಾಬ್ ಕಿಂಗ್ಸ್ ತಂಡವು ಬೃಹತ್ ಮೊತ್ತ ಗಳಿಸುವ ಕನಸಿಗೆ ತಣ್ಣೀರೆರಚುವಂತೆ ಮಾಡಿತು.