ಸಿಲಿಂಡರ್ ಸ್ಫೋಟ – 1 ವರ್ಷದ ಮಗು ಸೇರಿ ಮೂವರಿಗೆ ಗಂಭೀರ ಗಾಯ
ರಾಯಚೂರು: ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ (Cylinder) ಸ್ಫೋಟಗೊಂಡಿದ್ದು, ಒಂದೂವರೆ ವರ್ಷದ ಮಗು ಸೇರಿದಂತೆ ಮೂವರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ರಾಯಚೂರಿನ (Raichuru) ನೇತಾಜಿ ನಗರದಲ್ಲಿ ನಡೆದಿದೆ.
ಶಂಶುದ್ದೀನ್ ಅವರ ಮನೆಯಲ್ಲಿ ಅವಘಡ ಸಂಭವಿಸಿದ್ದು, ಸ್ಫೋಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಮಹಿಳೆಯೊಬ್ಬರು ಹಾರಿ ಬಿದ್ದಿದ್ದಾರೆ.
ಸಿಲಿಂಡರ್ ಸ್ಫೋಟದ (Cylinder Blast) ವೇಳೆ ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಒಂದೂವರೆ ವರ್ಷದ ಮಗುವಿಗೆ ಗಂಭೀರ ಗಾಯಗಳಾಗಿವೆ. ಅಂಜುಮ್, ನಫೀಜಾ ಬಾನು ಹಾಗೂ ಪದ್ಮಾವತಿ ಗಾಯಾಳುಗಳು. ಗಾಯಾಳುಗಳನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಲಿಂಡರ್ನಲ್ಲಿ ಸೇಫ್ಟಿ ಪಿನ್ ಇಲ್ಲದಿದ್ದುದೇ ಸ್ಫೋಟಕ್ಕೆ ಕಾರಣ ಎನ್ನಲಾಗಿದೆ. 10 ದಿನಗಳ ಹಿಂದೆ ಗ್ಯಾಸ್ ಸಿಲಿಂಡರ್ ಅನ್ನು ಡೆಲಿವರಿ ಮಾಡಲಾಗಿತ್ತು. ಗ್ಯಾಸ್ ಏಜೆನ್ಸಿಯವರ ನಿರ್ಲಕ್ಷ್ಯವೇ ಸ್ಫೋಟಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಗ್ಯಾಸ್ ಬದಲಿಸಲು ಮುಂದಾದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮೆನೆಯಲ್ಲಿದ್ದ ವಸ್ತುಗಳೆಲ್ಲವೂ ಛಿದ್ರ ಛಿದ್ರವಾಗಿದೆ. ಘಟನೆ ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.