ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಮನೆ ಮತ್ತು ಬಟ್ಟೆ ಅಂಗಡಿ; ದಂಪತಿ ಸಜೀವ ದಹನ
ಯಾದಗಿರಿ (ಮಾ.27): ಯಾದಗಿರಿ ತಾಲೂಕಿನ ಸೈದಾಪುರದಲ್ಲಿರುವ ಬಟ್ಟೆ ಅಂಗಡಿಯಲ್ಲಿ ವಿದ್ಯುತ್ ಅವಘಡದಿಂದಾಗಿ ಅಗ್ನಿ ದುರಂತ ಸಂಭವಿಸಿ ದಂಪತಿಗಳಿಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ. ರಾಗಯ್ಯ (39) ಹಾಗೂ ರಾಗಯ್ಯ ಪತ್ನಿ ಶಿಲ್ಪ (35) ಮೃತ ದುರ್ದೈವಿಗಳು. ಮೂರು ಅಂತಸ್ತಿನ ಈ ಕಟ್ಟಡದಲ್ಲಿ, ಎರಡು ಅಂತಸ್ತುಗಳನ್ನು ಬಟ್ಟೆ ಅಂಗಡಿಗಾಗಿ ಮೀಸಲಿಡಲಾಗಿತ್ತು. ಮೂರನೇ ಮಹಡಿಯಲ್ಲಿ ದಂಪತಿಗಳು ವಾಸವಿದ್ದರು.
ಸೋಮವಾರ ಬೆಳಗಿನ ಜಾವ, ಸುಮಾರು 5:00 ಗಂಟೆಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಅವಘಡದಲ್ಲಿ ರಾಗಯ್ಯ ಅವರ ತಂದೆ ತಾಯಿ, ಹಾಗೂ ಪುತ್ರರಿಬ್ಬರನ್ನು ರಕ್ಷಿಸಲಾಗಿದೆ. ಎರಡು ಅಂತಸ್ತಿನ ಬಟ್ಟೆ ಮಳಿಗೆಯಲ್ಲಿ ಬೆಂಕಿ ಹತ್ತಿದ್ದರಿಂದ ಅದನ್ನು ನಂದಿಸುವ ಹರಸಾಹಸ ನಡೆದಿದೆ. ಸಾರ್ವಜನಿಕರು ಅಗ್ನಿಶಾಮಕದಳ ಹಾಗೂ ಪೊಲೀಸ್ ಇಲಾಖೆ ಅಗ್ನಿ ನಂದಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ಭಾಗದ ಪ್ರಮುಖ ಬಟ್ಟೆ ವ್ಯಾಪಾರಿ ಹಾಗೂ ಅವರ ಪತ್ನಿ ದುರಂತ ಅಂತ್ಯ ಸ್ಥಳೀಯರನ್ನು ಆಘಾತಕ್ಕೀಡಾಗಿಸಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಿನ್ನಲೆ ಈ ದುರಂತ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಘಟನೆ ನಡೆದಿದ್ದು, ಅಶೋಕಯ್ಯ ಕಾಳಬೆಳಗುಂದಿ ಎಂಬವರಿಗೆ ಸೇರಿದ ಮನೆಯಾಗಿದೆ. ಮನೆಯಲ್ಲಿಯೇ ಬಟ್ಟೆ ಅಂಗಡಿಯಿದೆ. ದಟ್ಟವಾದ ಹೊಗೆ ಆವರಿಸಿದ್ದರಿಂದ ಮನೆಯಿಂದ ಹೊರ ಬರಲು ಮೃತ ದಂಪತಿಗಳು ಪರದಾಟ ನಡೆಸಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸಲು ಹರಸಾಹಸ ಮಾಡಿದರೂ ದಂಪತಿಗಳನ್ನು ಜೀವಂತವಾಗಿ ಉಳಿಸಿಕೊಳ್ಳಲಾಗಲಿಲ್ಲ.