ಆನೇಕಲ್‌ನಲ್ಲಿ 22 ವರ್ಷದ ವಿಲೇಜ್ ಅಕೌಂಟೆಂಟ್ ನೇಣಿಗೆ ಶರಣು: ಯುವತಿ ಸಾವಿನ ಸುತ್ತ ಅನುಮಾನ
ಆನೇಕಲ್ (ಮಾ.26): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ ನಾಡ ಕಚೇರಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಯುವತಿ ಮನೆಯಲ್ಲಿ ಒಬ್ಬಳೇ ಇರುವಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇನ್ನು ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಅಲಿಯಾ ಅಂಜುಂ ಅಣ್ಣಿಗೇರಿ (22) ಎಂದು ಗುರುತಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಮೂಲದ ಯುವತಿ, ಸರ್ಜಾಪುರ ನಾಡ ಕಚೇರಿಯಲ್ಲಿ ವಿಲೇಜ್ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು. ಇನ್ನು ಇವರು ಆನೇಕಲ್ ಪಟ್ಟಣದ ಪೊಲೀಸ್ ಠಾಣೆ ಸಮೀಪದ ಮುನಿವೀರಪ್ಪ ಗಲ್ಲಿಯಲ್ಲಿ ಶ್ರೀನಿವಾಸ್ ರೆಡ್ಡಿ ಎಂಬುವವರ ಕಟ್ಟಡದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಾಗಿದ್ದರು. ಇನ್ನು ತಂದೆ- ತಾಯಿ ಊರಿನಲ್ಲಿ ವಾಸವಾಗಿದ್ದಾರೆ. ಅಣ್ಣ ಹಾಗೂ ತಂಗಿ ಇಬ್ಬರೇ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ವಾಸವಿದ್ದರು.
ಅಣ್ಣ ಊರಿಗೆ ಹೋದಾಗ ನೇಣಿಗೆ ಶರಣು: ಸರ್ಜಾಪುರದಲ್ಲಿ ತಂಗಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಆಕೆಯ ಮದುವೆ ಆಗುವವರೆಗೂ ಜೊತೆಯಲ್ಲಿರುವ ಉದ್ದೇಶದಿಂದ ಅಣ್ಣನೂ ಕೂಡ ತಂಗಿಯೊಂದಿಗೆ ಬಂದು ಆನೇಕಲ್ ಪಟ್ಟಣದಲ್ಲಿ ಪ್ರತ್ಯೇಕವಾಗಿ ಮನೆ ಮಾಡಕೊಂಡು ವಾಸವಾಗಿದ್ದರು. ಆದರೆ, ಯಾವುದೇ ಕಾರ್ಯ ನಿಮಿತ್ತ ಅಲಿಯಾ ಅಂಜುಂ ಅವರ ಅಣ್ಣ, ಬಳ್ಳಾರಿಯ ಗ್ರಾಮಕ್ಕೆ ಹೋಗಿದ್ದನು. ಇಂದು ಭಾನುವಾರ ರಜಾ ದಿನವಾದ್ದರಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಒಬ್ಬಳೇ ಇರುವಾಗ ಫ್ಯಾನಿಗೆ ಸೀರೆಯನ್ನು ಬಿಗಿದು ನೇಣಿಗೆ ಶರಣಾಗಿದ್ದಾಳೆ.
ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ: ಈ ಘಟನೆ ಕುರಿತು ಕಟ್ಟಡದ ಮಾಲೀಕರು ಆನೇಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯ ಮೃತದೇಹ ಮತ್ತು ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ. ಆದರೆ, ಯುವತಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ತಿಳಿದುಬಂದಿಲ್ಲ. ಇನ್ನು ಅಣ್ಣನೂ ಕೂಡ ಊರಿಗೆ ಹೋಗದ್ದು, ಮನೆಯವರಿಗೆ ವಿಚಾರ ತಿಳಿಸಲಾಗಿದೆ. ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ಕಾರಣ ತಿಳಿದುಬರಲಿದೆ. ಜೊತೆಗೆ, ಪೊಲೀಸರು ಕೂಡ ಸಾವಿಗೆ ಕಾರಣವನ್ನು ಹುಡುಕುತ್ತಿದ್ದಾರೆ.