ರೈಲ್ವೆ ನಿಲ್ದಾಣದ ಟಿವಿಯಲ್ಲಿ ಪ್ರಸಾರವಾಯ್ತು ಅಶ್ಲೀಲ ವೀಡಿಯೋ – ಮುಜುಗರಕ್ಕೊಳಗಾದ ಜನ

ಪಾಟ್ನಾ: ರೈಲ್ವೆ ನಿಲ್ದಾಣದಲ್ಲಿ (Railway Station) ಅಳವಡಿಸಲಾಗಿದ್ದ ಟಿವಿ ಪರದೆಯಲ್ಲಿ ಅಶ್ಲೀಲ ವೀಡಿಯೋ (Porn Clip) ಪ್ರಸಾರವಾಗಿ ಸ್ಥಳದಲ್ಲಿ ನೆರೆದಿದ್ದ ನೂರಾರು ಪ್ರಯಾಣಿಕರು ಮುಜುಗರಕ್ಕೀಡಾದ ಪ್ರಸಂಗ ಬಿಹಾರದ (Bihar) ಪಾಟ್ನಾ ರೈಲ್ವೇ ನಿಲ್ದಾಣದಲ್ಲಿ (Patna Railway Station) ನಡೆದಿದೆ.
ಭಾನುವಾರ ಬೆಳಗ್ಗೆ 9:30ರ ವೇಳೆಗೆ ನಿಲ್ದಾಣದಲ್ಲಿ ಸ್ಥಾಪಿಸಲಾಗಿದ್ದ ಟಿವಿ ಪರದೆ ಮೇಲೆ ಸುಮಾರು 3 ನಿಮಿಷಗಳ ಕಾಲ ಅಶ್ಲೀಲ ವೀಡಿಯೋ ಪ್ರದರ್ಶನವಾಗಿದೆ. ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರಿದ್ದು, ಈ ವೇಳೆ ಜನರು ಮುಜುಗರಕ್ಕೀಡಾಗಿದ್ದಾರೆ.
ಘಟನೆ ನಡೆದ ತಕ್ಷಣವೇ ಪ್ರಯಾಣಿಕರು ಈ ಬಗ್ಗೆ ಸರ್ಕಾರಿ ರೈಲ್ವೆ ಪೊಲೀಸ್ (GRP) ಹಾಗೂ ರೈಲ್ವೆ ರಕ್ಷಣಾ ಪಡೆಗೆ (RPF) ದೂರು ನೀಡಿದ್ದಾರೆ. ಬಳಿಕ ಪೊಲೀಸರು ಜಾಹೀರಾತು ಪ್ರದರ್ಶನ ಮಾಡುವ ಸಂಸ್ಥೆ ದತ್ತಾ ಕಮ್ಯುನಿಕೇಷನ್ ಬಳಿ ಈ ಬಗ್ಗೆ ವಿಚಾರಿಸಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರ ಮುಂದೆ ಈ ರೀತಿ ಅಶ್ಲೀಲ ವೀಡಿಯೋ ಪ್ರದರ್ಶನ ಮಾಡಿದ್ದಕ್ಕಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಳಿಕ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಜಾಹೀರಾತು ಪ್ರಸಾರ ಮಾಡಲು ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಗೊಳಿಸಿದ್ದಾರೆ ಮತ್ತು ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಅಶ್ಲೀಲ ವೀಡಿಯೋ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ 10 ರಲ್ಲಿ ಮಾತ್ರವೇ ಪ್ರಸಾರವಾಗಿತ್ತು. ನಿರ್ಧಿಷ್ಟ ಪ್ಲಾಟ್ಫಾರ್ಮ್ನಲ್ಲಿ ವೀಡಿಯೋ ಪ್ರಸಾರ ಮಾಡಿರುವುದನ್ನು ಗಮನಹರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆಯೂ ಪ್ರತ್ಯೇಕ ವಿಚಾರಣೆ ನಡೆಸುತ್ತಿದೆ.