‘ಕಬ್ಜ’ 100 ಕೋಟಿ ಕ್ಲಬ್ ಸೇರ್ಪಡೆ: ವೀಕೆಂಡ್ ನಲ್ಲಿ ಇನ್ನೂ ಹೆಚ್ಚಿದ ಕಲೆಕ್ಷನ್

ಆರ್.ಚಂದ್ರು (R. Chandru) ನಿರ್ದೇಶನದಲ್ಲಿ ಮೂಡಿ ಬಂದ ‘ಕಬ್ಜ’ (Kabzaa) ಸಿನಿಮಾ ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ನಿನ್ನೆ ಚಿತ್ರತಂಡವು ಪತ್ರಿಕಾಗೋಷ್ಠಿ ಮಾಡಿ ಅಧಿಕೃತವಾಗಿಯೇ ಮಾಹಿತಿಯನ್ನು ಹಂಚಿಕೊಂಡಿದೆ. ಕಬ್ಜ ನೂರು ಕೋಟಿ ಕ್ಲಬ್ (100 Crore Club) ಸೇರುತ್ತಿದ್ದಂತೆಯೇ ಚಿತ್ರೋದ್ಯಮದಲ್ಲಿ ಹುಮ್ಮಸ್ಸು ಹೆಚ್ಚಿದೆ. ಸ್ಯಾಂಡಲ್ ವುಡ್ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರಕ್ಕೆ ಶುಭಾಶಯಗಳನ್ನು ತಿಳಿಸಿ, ಚಂದ್ರು ಬೆನ್ನಿಗೆ ನಿಂತಿದ್ದಾರೆ.
ಸಿನಿಮಾದ ಯಶಸ್ಸಿನ ಕುರಿತು ಮಾತನಾಡಿರುವ ಉಪೇಂದ್ರ (Upendra), ‘ಇದು ನಿರೀಕ್ಷೆಗೂ ಮೀರಿ ಬಂದ ಪ್ರತಿಕ್ರಿಯೆ. ಒಂದು ಸಿನಿಮಾ ಗೆದ್ದರೆ ಉದ್ಯಮ ಉಸಿರಾಡುತ್ತದೆ’ ಎಂದಿದ್ದಾರೆ. ಪರೋಕ್ಷವಾಗಿ ಕಬ್ಜ ಮತ್ತೆ ಚಿತ್ರೋದ್ಯಮವನ್ನು ಉಸಿರಾಡುವಂತೆ ಮಾಡಿದೆ ಎಂದು ಹೆಮ್ಮೆಯಿಂದ ಮಾತನಾಡಿದ್ದಾರೆ. ಈ ಸಿನಿಮಾದ ಗೆಲುವಿನ ಬೆನ್ನಲ್ಲೇ ಕಬ್ಜ 2 ಸಿನಿಮಾದ ಕುರಿತು ಹಲವು ಚರ್ಚೆಗಳು ನಡೆದಿರುವ ಕುರಿತು ಮಾತನಾಡಿದರು.
ಕೆಜಿಎಫ್, ಕಾಂತಾರ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಬ್ಜ ಸಖತ್ ಸದ್ದು ಮಾಡುತ್ತಿದೆ. ಆರ್.ಚಂದ್ರು ಅವರ ಆಪ್ತರ ಮಾಹಿತಿಯಂತೆ, ಹಲವು ಸಿನಿಮಾ ರಂಗಗಳಿಂದ ಚಂದ್ರು ಅವರಿಗೆ ಆಫರ್ ಕೂಡ ಬರುತ್ತಿವೆಯಂತೆ. ಅದರಲ್ಲೂ ಬಾಲಿವುಡ್ ನ ಹೆಸರಾಂತ ಸಂಸ್ಥೆಯೊಂದು ಕಬ್ಜ ಸಿನಿಮಾ ವೀಕ್ಷಿಸಿದ ನಂತರ ಚಂದ್ರು ಅವರನ್ನು ಕಾಂಟ್ಯಾಕ್ಟ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗಿದ್ದು, ವೀಕೆಂಡ್ ನಲ್ಲಿ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ ಎಂದು ವಿತರಕ ಮೋಹನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಮತ್ತಷ್ಟು ಪ್ರದರ್ಶನಗಳ ಬೇಡಿಕೆ ಬರುತ್ತಿದೆ ಎಂದು ಅವರು ಹೇಳಿದರು. ಕಳೆದ ಮೂರು ದಿನಗಳಿಂದ ಭಾರತದಾದ್ಯಂತ ಕಬ್ಜ ಕ್ರೇಜ್ ಕ್ರಿಯೇಟ್ ಮಾಡಿದ್ದು, ಕನ್ನಡದ ಮತ್ತೊಂದು ಚಿತ್ರ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ.