ಬಂಗಾರ ಬೆಲೆಯಲ್ಲಿ ಭಾರೀ ಏರಿಕೆ; ವಿದೇಶಗಳಲ್ಲಿ 50 ಸಾವಿರ ಗಡಿದಾಟಿದ ಚಿನ್ನದ ಬೆಲೆ

ಬೆಂಗಳೂರು: ಭಾರತ ಹಾಗೂ ಇತರ ವಿದೇಶೀ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ (Gold Rates Hike) ಗಣನೀಯವಾಗಿ ಹೆಚ್ಚುತ್ತಾ ಬಂದಿದೆ. ಕಳೆದ ವಾರ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 3 ಸಾವಿರ ರುಪಾಯಿಗೂ ಹೆಚ್ಚು ಏರಿಕೆ ಕಂಡಿದೆ. ಇದೀಗ ಅದರ ಬೆಲೆ ಭಾರತದಲ್ಲಿ 55,300 ರುಪಾಯಿ ಆಗಿದೆ. ಮುಂದಿನ ದಿನಗಳೂ ಬೆಲೆಗಳಲ್ಲಿ ಕ್ಷಿಪ್ರ ವ್ಯತ್ಯಯಗಳಾಗುವ ಸಾಧ್ಯತೆ ಇದೆ.
24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 60,000 ರುಪಾಯಿ ಗಡಿ ದಾಟಿ ಹೋಗಿದೆ. ಬೆಳ್ಳಿ ಬೆಲೆ ಚಿನ್ನದಷ್ಟಲ್ಲದಿದ್ದರೂ ತಕ್ಕಮಟ್ಟಿಗೆ ಏರಿಕೆ ಕಾಣುತ್ತಿದೆ. ಭಾರತದಲ್ಲಿ ಬೆಳ್ಳಿ ಬೆಲೆ 10 ಗ್ರಾಮ್ಗೆ 721 ರುಪಾಯಿ ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 55,350 ರುಪಾಯಿ ಆದರೆ, 100 ಗ್ರಾಮ್ ಬೆಳ್ಳಿ ಬೆಲೆ 7,440 ರುಪಾಯಿಗೆ ಏರಿಕೆಯಾಗಿದೆ.
ವಿದೇಶಗಳ ಚಿನಿವಾರಪೇಟೆಗಳಲ್ಲಿಯೂ (Bullion Market) ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಅಮೆರಿಕದಲ್ಲಿ ನಾಲ್ಕೈದಿನ ತಟಸ್ಥವಾಗಿದ್ದ ಚಿನ್ನದ ಬೆಲೆ ಮೊನ್ನೆ ತುಸು ಹೆಚ್ಚಿದೆ. ಈಗ ಬಹುತೇಕ ಎಲ್ಲಾ ವಿದೇಶಗಳಲ್ಲೂ ಚಿನ್ನದ ಬೆಲೆ ಭಾರತೀಯ ರುಪಾಯಿ ಲೆಕ್ಕದಲ್ಲಿ 50 ಸಾವಿರ ರೂ ಗಡಿ ದಾಟಿದೆ. ಮಲೇಷ್ಯಾ, ಕತಾರ್ ಮತ್ತು ಓಮನ್ನಲ್ಲಿ ಚಿನ್ನದ ಬೆಲೆ 52 ಸಾವಿರ ರೂಗಿಂತ ಹೆಚ್ಚಿದೆ.