ಈಕ್ವೆಡಾರ್ನಲ್ಲಿ 6.8 ತೀವ್ರತೆಯ ಭಾರೀ ಭೂಕಂಪ – 14 ಜನ ಬಲಿ
ಕ್ವಿಟೋ: ಶನಿವಾರ ಈಕ್ವೆಡಾರ್ (Ecuador) ಹಾಗೂ ಉತ್ತರ ಪೆರುವಿನ (Peru) ಕರಾವಳಿ ಪ್ರದೇಶದಲ್ಲಿ 6.8 ತೀವ್ರತೆಯ ಭಾರೀ ಭೂಕಂಪ (Earthquake) ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ನಗರದ ಅನೇಕ ಮನೆಗಳು ಹಾಗೂ ಕಟ್ಟಡಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತವಾಗಿದೆ.
ಭೂಕಂಪದ ತೀವ್ರತೆ 6.8ರಷ್ಟು ಇದ್ದು, ಗುವಾಯಾಸ್ ಪ್ರಾಂತ್ಯದ ಬಾಲಾವೋ ನಗರದಿಂದ 10 ಕಿ.ಮೀ ದೂರದಲ್ಲಿ ಹಾಗೂ 66.4 ಕಿ.ಮೀ ಆಳದಲ್ಲಿ ಇದರ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ.
ವರದಿಗಳ ಪ್ರಕಾರ ಭೂಕಂಪದಿಂದಾಗಿ ಇಲ್ಲಿ ವರೆಗೆ 14 ಜನರು ಸಾವನ್ನಪ್ಪಿದ್ದಾರೆ. ಸುಮಾರು 380 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೆಚ್ಚಿನ ಹಾನಿ ಎಲ್ ಓರೋ ಪ್ರದೇಶದಲ್ಲಿ ಉಂಟಾಗಿದೆ. ಕನಿಷ್ಠ 44 ಮನೆಗಳು ಸಂಪೂರ್ಣ ನಾಶವಾದರೆ, 90ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.
ಸುಮಾರು 50 ಶೈಕ್ಷಣಿಕ ಕಟ್ಟಡಗಳು ಹಾಗೂ 30 ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳ ಮೇಲೆ ಈ ಭೂಕಂಪ ಪರಿಣಾಮ ಬೀರಿದೆ. ಭೂಕಂಪದಿಂದಾಗಿ ಹಲವೆಡೆ ರಸ್ತೆಗಳು ಕುಸಿದಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ನಗರದ ಸಾಂಟಾ ರೋಸಾ ವಿಮಾನ ನಿಲ್ದಾಣದಲ್ಲಿಯೂ ಸಣ್ಣ ಮಟ್ಟದ ಹಾನಿ ಉಂಟಾಗಿದೆ. ಆದರೆ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿಲ್ಲ.