ವ್ಯಾಪಾರದಲ್ಲಿ ನಷ್ಟ – ಬಟ್ಟೆ ವ್ಯಾಪಾರಿ ನೇಣುಬಿಗಿದು ಆತ್ಮಹತ್ಯೆ
ಮಡಿಕೇರಿ: ವ್ಯಾಪಾರದಲ್ಲಿ ನಷ್ಟದಿಂದಾಗಿ ಬಟ್ಟೆವ್ಯಾಪಾರಿ (Merchant) ನೇಣುಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಕೊಡಗು (Kodagu) ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ನಾಪೊಕ್ಲುವಿನಲ್ಲಿ ನಡೆದಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಡ್ಲಹಳ್ಳಿ ಗ್ರಾಮದ ನಿವಾಸಿಯಾಗಿರುವ ಸಂದೀಪ್ (40) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕಳೆದ 20 ವರ್ಷಗಳಿಂದ ನಾಪೊಕ್ಲುವಿನಲ್ಲಿ ಆರ್.ಹೆಚ್. ಬಟ್ಟೆಮಳಿಗೆ ನಡೆಸುತ್ತಿದ್ದ ಸಂದೀಪ್ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ವ್ಯಾಪಾರದಲ್ಲಿ ನಷ್ಟದಿಂದಾಗಿ ವ್ಯಾಪಾರವನ್ನು ಸ್ಥಗಿತಗೊಳಿಸಿ ಬದುಕು ಸಾಗಿಸಲು ಕಷ್ಟಪಡುತ್ತಿದ್ದರು.
ಸೋಮವಾರ ಬೆಳಗ್ಗೆ 7:30ಕ್ಕೆ ತನ್ನ ಸ್ನೇಹಿತ ಸಂದೇಶ್ ಎಂಬುವವರಿಗೆ ಕರೆ ಮಾಡಿ 9 ಗಂಟೆಗೆ ಮನೆಗೆ ಬರುವಂತೆ ಸಂದೀಪ್ ತಿಳಿಸಿದ್ದರು. ಅದರಂತೆ 9 ಗಂಟೆಗೆ ಸಂದೇಶ್ ತನ್ನ ಸ್ನೇಹಿತನಾದ ಸಂದೀಪ್ ಮನೆಗೆ ತೆರಳಿದಾಗ ಸಂದೀಪ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಂದೇಶ್ ಅವರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ವ್ಯಾಪಾರದಲ್ಲಿ ಉಂಟಾದ ನಷ್ಟದಿಂದಾಗಿ ಸಂದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.