ದುಬೈನಲ್ಲಿ ಭೀಕರ ರಸ್ತೆ ಅಪಘಾತ – ರಾಯಚೂರು ಮೂಲದ ನಾಲ್ವರು ಸ್ಥಳದಲ್ಲೇ ಸಾವು
ರಾಯಚೂರು: ದುಬೈನಲ್ಲಿ (Dubai) ಸಂಭವಿಸಿರುವ ಬಸ್ ಹಾಗೂ ಕಂಟೇನರ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ (Accident) ರಾಯಚೂರು (Raichur) ಮೂಲದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ರಾಯಚೂರಿನಿಂದ ಉಮ್ರಾ ಯಾತ್ರೆಗೆ ತೆರಳಿದ್ದ ಇಡೀ ಕುಟುಂಬ ಅಪಘಾತಕ್ಕೀಡಾಗಿದೆ. ಮೃತರು ನಗರದ ಆಶಾಪುರ ರಸ್ತೆಯ ದ್ವಾರಕಾನಗರದ ನಿವಾಸಿಗಳು. ರಾಯಚೂರು ಕೃಷಿ ವಿವಿಯಲ್ಲಿ ಕುಲಪತಿಗಳ ಆಪ್ತ ಸಹಾಯಕರಾಗಿದ್ದ ಶಫಿ ಸುಳ್ಳೇದ್ (53), ಅವರ ಪತ್ನಿ ಸಿರಾಜ್ ಬೇಗಂ (45), ಪುತ್ರಿ ಶಿಫಾ (20), ತಾಯಿ ಬೇಬಿ ಜಾನ್ (64) ಮೃತ ದುರ್ದೈವಿಗಳು. ಅಪಘಾತದಲ್ಲಿ ಪುತ್ರ ಸಮೀರ್‌ಗೆ ಗಂಭೀರವಾಗಿ ಗಾಯಗಳಾಗಿದ್ದು, ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಫಿ ಸುಳ್ಳೇದ್ ಕುಟುಂಬ ಫೆಬ್ರವರಿ 14 ರಂದು ನಗರದಿಂದ ಮೆಕ್ಕಾ, ಮದೀನಾಕ್ಕೆ ತೆರಳಿದ್ದರು. ಫೆಬ್ರವರಿ 22 ರಂದು ಬೆಳಗಿನ ಜಾವ ಶಫಿ ಕುಟುಂಬ ಪ್ರಯಾಣಿಸುತ್ತಿದ್ದ ಬಸ್ ಕಂಟೇನರ್‌ಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಚಾಲಕ ಸೇರಿ ಬಸ್‌ನಲ್ಲಿದ್ದ ಹಲವರು ಸಾವನ್ನಪ್ಪಿದ್ದಾರೆ. ಮೃತರ ಒಟ್ಟು ಸಂಖ್ಯೆ ತಿಳಿದುಬಂದಿಲ್ಲ.
ಪವಿತ್ರ ಯಾತ್ರೆಗೆ ತೆರಳಿದ್ದ ವೇಳೆ ಅಪಘಾತ ಸಂಭವಿಸಿರುವುದರಿಂದ ಮೃತರ ಅಂತ್ಯಕ್ರಿಯೆ ದುಬೈನಲ್ಲೇ ಮಾಡಲಾಗುತ್ತದೆ ಎಂದು ಮೃತರ ಕುಟುಂಬದವರು ತಿಳಿಸಿದ್ದಾರೆ.