ಉಡುಪಿ: ಮಹಿಳೆಯ ಚಿನ್ನದ ಮಾಂಗಲ್ಯ ಸರ ಸುಲಿಗೆ ಮಾಡಿ ಪರಾರಿ
Twitter
Facebook
LinkedIn
WhatsApp
ಉಡುಪಿ, ಫೆ 23 : ದ್ವಿಚಕ್ರದಲ್ಲಿ ಬಂದು ಇಬ್ಬರು, ಪಾದಾಚಾರಿ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುವ ಘಟನೆ ಫೆ. 22ರಂದು ಬೆಳಗ್ಗೆ ನಾಯರ್ ಕೆರೆ ವಾಣಿಜ್ಯ ತೆರಿಗೆಗಳ ಭವನದ ಎದುರು ನಡೆದಿದೆ.
ಬ್ರಹ್ಮಗಿರಿ ಸತ್ಯಸಾಯಿ ಮಾರ್ಗದ ನಿವಾಸಿ ಜೆಟ್ಲ ಸತ್ಯನಾರಾಯಣ ಎಂಬವರ ಪತ್ನಿ ವಿಜಯ ಜೆ.ಎಸ್. (61) ಎಂಬವರು ಬ್ರಹ್ಮಗಿರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಹಿಂದಿನಿಂದ ಬೈಕಿನಲ್ಲಿ ಅಂದಾಜು 20 ರಿಂದ 30 ವರ್ಷ ಪ್ರಾಯದ ಇಬ್ಬರು ಯುವಕರು ಬಂದು ಬೈಕ್ ಹಿಂದೆ ಕುಳಿತಿದ್ದ ವ್ಯಕ್ತಿ ವಿಜಯ ಅವರ ಕುತ್ತಿಗೆಗೆ ಕೈ ಹಾಕಿ ತಳ್ಳಿ, ನೆಲಕ್ಕೆ ಬೀಳಿಸಿ, 50 ಗ್ರಾಂ ತೂಕದ ಚಿನ್ನದ ಮಾಂಗಲ್ಯದ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾದರು. ಸುಲಿಗೆಯಾದ ಸರದ ಮೌಲ್ಯ 2,50,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.