ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು: ಬೆಂಕಿ ಹತೋಟಿಗೆ ಅರಣ್ಯ ಸಿಬ್ಬಂದಿ ಹರಸಾಹಸ
ಉಜಿರೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಕಡೆಯಿಂದ ಅಳದಂಗಡಿಯ ಊರ್ಜಾಲುಬೆಟ್ಟ, ಹೂವಿನಕೊಪ್ಪಲು ಅರಣ್ಯದ ಹುಲ್ಲುಗಾವಲು ಪರಿಸರವನ್ನು ಬೆಂಕಿ ವ್ಯಾಪಿಸಿದ್ದು ಹತೋಟಿಗೆ ತರಲು ವನ್ಯಜೀವಿ ವಿಭಾಗ ಹರಸಾಹಸ ಪಡುತ್ತಿದೆ.
ಬೆಂಕಿ ಕಾಣಿಸಿಕೊಂಡಿರುವ ಪ್ರದೇಶ ಕುದುರೆಮುಖಕ್ಕೆ ಸಮೀಪವಾದರೂ ಅದು ಬೆಳ್ತಂಗಡಿ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿದೆ. ಬೆಂಕಿ ಬಿದ್ದಿರುವ ಪ್ರದೇಶಕ್ಕೆ ಏಳೆಂಟು ಕಿ.ಮೀ. ದೂರವನ್ನು ಟ್ರಕ್ಕಿಂಗ್ ಮೂಲಕ ಕ್ರಮಿಸಬೇಕು. ಮಂಗಳವಾರದಿಂದ ಇಲ್ಲಿ ಬೆಂಕಿ ಹತೋಟಿಗೆ ತರಲು ಅಹರ್ನಿಶಿ ಪ್ರಯತ್ನ ನಡೆದಿದೆ. ಬೆಂಕಿ ಉಂಟಾಗಿರುವ ಪ್ರದೇಶಕ್ಕೆ ತೆರಳಬೇಕಾದರೆ ಗುಡ್ಡ, ಬೆಟ್ಟ ಹತ್ತಿ ಹೋಗಲು ಹಲವು ತಾಸು ಬೇಕು. ಇಂತಹ ದುರ್ಗಮ ಪ್ರದೇಶದಲ್ಲಿ ಬುಧವಾರ ಬೆಂಕಿ ನಂದಿಸುವ ಕಾರ್ಯ ಭರದಿಂದ ನಡೆದಿದೆ.
ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹುಲ್ಲುಗಾವಲು ವ್ಯಾಪ್ತಿಯ ಅಲ್ಲಲ್ಲಿ ಬೆಂಕಿ ಪಸರಿಸಿರುವ ಕುರಿತು ಮಾಹಿತಿ ಇದೆ. ಮಲವಂತಿಗೆ ಗ್ರಾಮದ ಕೊಲ್ಲಿ ಪ್ರದೇಶದಲ್ಲಿ, ಚಾರ್ಮಾಡಿ ಪರ್ಲಾಣಿ ಪರಿಸರ ಹಾಗೂ ಕೊಟ್ಟಿಗೆಹಾರ ವಿಭಾಗದ ಅಣ್ಣಪ್ಪ ಬೆಟ್ಟ ಸಮೀಪ ಉಂಟಾಗಿದ್ದ ಬೆಂಕಿಯನ್ನು ಪೂರ್ಣ ಪ್ರಮಾಣದಲ್ಲಿ ಹತೋಟಿಗೆ ತರಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಕಾರ್ಯಾಚರಣೆಯಲ್ಲಿ ವನ್ಯಜೀವಿ ವಿಭಾಗದ ಬೆಳ್ತಂಗಡಿ ಆರ್‌ಎಫ್‌ಒ ಸ್ವಾತಿ, ಡಿಆರ್‌ಎಫ್‌ಒ ಕಿರಣ್ ಪಾಟೀಲ್, ರಂಜಿತ್, ರವೀಂದ್ರ ಅಂಕಲಗಿ, ನಾಗೇಶ್, ಗಸ್ತು ಅರಣ್ಯ ಪಾಲಕರಾದ ಮಾರುತಿ, ರಾಜು, ಭರತೇಶ್, ರಾಘವೇಂದ್ರ, ಪಾಂಡುರಂಗ ಕಮತಿ, ಸ್ಥಳೀಯರು ಸೇರಿ 50ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ.