ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಿಂದ ಕರ್ನಾಟಕಕ್ಕೆ ಅಪಖ್ಯಾತಿ: ಸುರ್ಜೇವಾಲ
ಮಂಡ್ಯ(ಫೆ.22): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಿಂದ ರಾಜ್ಯಕ್ಕೆ ಅಪಖ್ಯಾತಿ ಬಂದೊದಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಹಲವು ಮುಖಗಳನ್ನು ಹೊಂದಿದೆ ಇದು ರಾಜ್ಯಕ್ಕೆ ಕಳಂಕ ತರುವ ವಿಚಾರ ಎಂದು ಹೇಳಿದರು.
ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ಸಿದ್ದರಾಮಯ್ಯ ಹತ್ಯೆಗೆ ಪ್ರಚೋದನೆ ನೀಡುತ್ತಾರೆ ಎಂದು ಹರಿಹಾಯ್ದ ಅವರು, ಉನ್ನತ ಶಿಕ್ಷಣ ಸಚಿವರ ಪ್ರಚೋದನೆ ಹಿಂದೆ ನರೇಂದ್ರ ಮೋದಿ, ಜೆ.ಪಿ. ನಡ್ಡಾ ಹಾಗೂ ಬಸವರಾಜ ಬೊಮಾಯಿ ಬೆಂಬಲವಿದ್ದು, ಬಿಜೆಪಿಗೆ ಬಹಿರಂಗ ಸವಾಲು ಹಾಕುತ್ತೇವೆ. ಸ್ಥಳ ಹಾಗೂ ದಿನಾಂಕವನ್ನು ನಿಗದಿಪಡಿಸಿದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಅವರ ಬಳಿಗೇ ಕರೆತರುತ್ತೇವೆ. ಹತ್ಯೆ ಮಾಡಲು ಸಿದ್ಧರಿದ್ದೀರಾ? ಎಂದು ಪ್ರಶ್ನಿಸಿದರು.
ತುಟಿ ಬಿಚ್ಚದ ಪ್ರಧಾನಿ:
ರಾಜ್ಯದ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಸರ್ಕಾರವೆಂದು ರಾಜ್ಯ ಗುತ್ತಿಗೆದಾರರ ಸಂಘ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಪ್ರಧಾನ ಮಂತ್ರಿಗೆ ಪತ್ರ ಬರೆದಿದೆ. ಈ ನಡುವೆ ರಾಜ್ಯಕ್ಕೆ ಎಂಟು ಬಾರಿ ಭೇಟಿ ನೀಡಿರುವ ಪ್ರಧಾನಿಗಳು ಭ್ರಷ್ಟಾಚಾರದ ಬಗ್ಗೆ ತುಟಿಬಿಚ್ಚದೆ ಮೌನಕ್ಕೆ ಶರಣಾಗಿರುವುದು ದುರದೃಷ್ಟಕರ ಎಂದು ಟೀಕಿಸಿದರು.