ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಆ್ಯಸಿಡ್ ದಾಳಿ
ರಾಮನಗರ: ಪ್ರೀತಿ ನಿರಾಕರಿಸಿದಳೆಂದು ಕುಪಿತಗೊಂಡ ಯುವಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಆ್ಯಸಿಡ್ ದಾಳಿ (Acid Attack At Ramanagara) ನಡೆಸಿದ ಕ್ರೂರ ಘಟನೆ ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿ ನಡೆದಿದೆ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸುಮಂತ್ ಎಂಬ ಆರೋಪಿಯೇ ಈ ಕೃತ್ಯ ಎಸಗಿದ್ದು, ಘಟನೆ ನಂತರ ಆರೋಪಿ ಪರಾರಿಯಾಗಿದ್ದಾನೆ. ಗಾಯಾಳು ಬಾಲಕಿಯನ್ನು ಕೂಡಲೇ ಕನಕಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾಖಿಸಲಾಗಿದೆ. ಪ್ರಕರಣ ಸಂಬಂಧ ಸುಮಂತ್ ವಿರುದ್ಧ ಕನಕಪುರ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಪಾಗಲ್ ಪ್ರೇಮಿ ಸುಮಂತ್ಗೆ ಪಿಯುಸಿ ವ್ಯಾಸಾಂಗ ನಡೆಸುತ್ತಿರುವ ಅಪ್ರಾಪ್ತ ಬಾಲಕಿ ಮೇಲೆ ಪ್ರೇಮಾಂಕುರವಾಗಿದೆ. ಈ ಬಗ್ಗೆ ಹೇಮಂತ್ ಬಾಲಕಿ ಜೊತೆ ಹೇಳಿಕೊಂಡಿದ್ದಾನೆ. ಆದರೆ ಸುಮಂತ್ ಪ್ರೀತಿಯನ್ನು ಆಕೆ ನಿರಾಕರಿಸಿದ್ದಾಳೆ. ಇದರಿಂದ ಸುಮಂತ್ ಆಕ್ರೋಶಗೊಂಡು ಆಕೆ ಮೇಲೆ ಹೇಯ ಕೃತ್ಯ ಎಸಗಲು ಸಂಚು ರೂಪಿಸುತ್ತಾನೆ.
ಪ್ರೀತಿ ನಿರಾಕಿಸಿದ ಬಾಲಕಿಗೆ ದೂರವಾಣಿ ಕರೆ ಮಾಡಿದ ಸುಮಂತ್, ನಿನ್ನ ಜೊತೆ ಮಾತನಾಡಬೇಕು ಎಂದು ಹೇಳಿ ಬೈಪಾಸ್ ರಸ್ತೆ ಬಳಿ ಬರುವಂತೆ ಮನವಿ ಮಾಡಿಕೊಂಡಿದ್ದಾನೆ. ಅದರಂತೆ ಬಾಲಕಿ ತನ್ನ ತಮ್ಮನ ಜೊತೆ ತೆರಳಿ ಸುಮಂತ್ನನ್ನು ಭೇಟಿಯಾಗುತ್ತಾಳೆ. ಈ ವೇಳೆ ಬಾಲಕಿಯ ಮುಖಕ್ಕೆ ಸುಮಂತ್ ಆ್ಯಸಿಡ್ ಎರಚಿ ಬೈಕ್ ಮೂಲಕ ಪರಾರಿಯಾಗಿದ್ದಾನೆ. ಕೂಡಲೇ ಗಾಯಾಳು ಬಾಲಕಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸದ್ಯ ಬಾಲಕಿಯನ್ನು ಕತ್ತಲೆಗೆ ತಳ್ಳಲು ಯತ್ನಿಸಿದ ಆರೋಪಿ ಸುಮಂತ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.