ಬದಲಾವಣೆ ಸಂಕಲ್ಪಯಾತ್ರೆ ಆರಂಭಿಸಿ ಸಿ.ಟಿ ರವಿ ಗೆ ಶಾಕ್ ; ಚಿಕ್ಕಮಗಳೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ!!
ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಪ್ತರಲ್ಲಿ ಒಬ್ಬರಾಗಿ ಗುರ್ತಿಸಿಕೊಂಡಿದ್ದ ಬಿಜೆಪಿ ಮುಖಂಡ ಹೆಚ್ ಡಿ ತಮ್ಮಯ್ಯ ಅವರು ನಿನ್ನೆ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಸಿ.ಟಿ ರವಿ ಅವರಿಗೆ ಬಿಗ್ ಶಾಕ್ ನೀಡಿದ್ದಾರೆ.
ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಹೊತ್ತಲ್ಲೇ ಚಿಕ್ಕಮಗಳೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ. ನಿನ್ನೆ (ಫೆ.16) ಶಾಸಕ ಸಿ.ಟಿ.ರವಿ ಆಪ್ತ ತಮ್ಮಯ್ಯ ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಮತ್ತಷ್ಟು ಮುಖಂಡರು, ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಗುಜರಾತ್ ಮಾದರಿಯಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದು, ಹೆಚ್.ಡಿ.ತಮ್ಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
ಇಂದು(ಫೆಬ್ರವರಿ 17) ಚಿಕ್ಕಮಗಳೂರಿನ ಸನ್ರೈಸ್ ಹೋಟೆಲ್ ನಲ್ಲಿ 500ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಹಾಗೂ ಲಿಂಗಾಯತ ಮುಖಂಡ ಸಭೆ ನಡೆಸಿದರು. ಈ ಸಭೆಯಲ್ಲಿ ಸಿ.ಟಿ ರವಿ ವಿರುದ್ಧ ಬದಲಾವಣೆ ಸಂಕಲ್ಪಯಾತ್ರೆಗೆ ನಿರ್ಧರಿಸಿದ್ದು, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹೆಚ್.ಡಿ ತಮ್ಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲು ಸಭೆಯಲ್ಲಿ ತೀರ್ಮಾನಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಅತ್ಯಂತ ಆಪ್ತರೆಂದು ಗುರುತಿಸಿಕೊಂಡಿದ್ದ ಮತ್ತು ಚಿಕ್ಕಮಗಳೂರು ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ಹೆಚ್ ಡಿ ತಮ್ಮಯ್ಯ ಅವರು ನಿನ್ನೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಏಕಾಏಕಿ ಪಕ್ಷವನ್ನು ಬಿಡಬೇಕು ಅಂದರೇ ನೋವು ಉಂಟಾಗುತ್ತಿದೆ. ನಾನು ಮುಂದೆ ಏನೇ ತೀರ್ಮಾನ ಕೈಗೊಂಡರು ಅವರುಗಳ ಬಗ್ಗೆ ಗೌರವ ಪೂರ್ವಕವಾಗಿ ನಿರ್ಧಾರವನ್ನು ಕೈಗೊಳ್ಳಲಿದ್ದೇನೆ. ಆದರೂ ಅನಿವಾರ್ಯ ಕಾರಣದಿಂದ ಬಿಜೆಪಿ ಪಕ್ಷವನ್ನು ಬಿಡುತ್ತಿದ್ದೇನೆ ಎಂದು ಘೋಷಿಸಿದರು.