ಏರೋ ಇಂಡಿಯಾದಲ್ಲಿ ದಾಖಲೆಯ 80000 ಕೋಟಿ ರು. ಒಪ್ಪಂದಕ್ಕೆ ಸಹಿ
ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ವಿವಿಧ ಕಂಪನಿಗಳ ನಡುವೆ 266 ಸಹಭಾಗಿತ್ವ, 201 ಒಪ್ಪಂದ, 53 ಪ್ರಮುಖ ಘೋಷಣೆ, 9 ಉತ್ಪನ್ನ ಬಿಡುಗಡೆ, ಮೂರು ತಂತ್ರಜ್ಞಾನ ವರ್ಗಾವಣೆ ಸೇರಿದಂತೆ ಒಟ್ಟು 80 ಸಾವಿರ ಕೋಟಿ ರು. ಮೌಲ್ಯದ ಒಪ್ಪಂದಗಳು ಏರ್ಪಟ್ಟಿವೆ. ಇದು 2021ರಲ್ಲಿ ನಡೆದ ಕಳೆದ ಬಾರಿಯ ಏರೋ ಇಂಡಿಯಾದಲ್ಲಿ ಏರ್ಪಟ್ಟಿದ್ದ 55,000 ಕೋಟಿ ರು. ಒಪ್ಪಂದಕ್ಕಿಂತ 25,000 ಕೋಟಿ ರು.ನಷ್ಟುಅಧಿಕವಾಗಿದೆ. ತನ್ಮೂಲಕ ಈ ಸಲದ ಏರೋ ಇಂಡಿಯಾ ರಾಜ್ಯದಲ್ಲಿ ನಡೆದ ಎಲ್ಲ ಏರೋ ಇಂಡಿಯಾಗಳ ಪೈಕಿ ಅತಿಹೆಚ್ಚು ಮೌಲ್ಯದ ರಕ್ಷಣಾ ಒಪ್ಪಂದಗಳು ಏರ್ಪಟ್ಟಆವೃತ್ತಿ ಎಂಬ ದಾಖಲೆ ಬರೆದಿದೆ.
ಇದೇ ವೇಳೆ 2,900 ಕೋಟಿ ರು. ಗೂ ಹೆಚ್ಚು ಮೌಲ್ಯದ ಹೂಡಿಕೆಯ 32 ಒಪ್ಪಂದಗಳಿಗೆ (investment agreements) ಕರ್ನಾಟಕದ ಸಾರ್ವಜನಿಕ ವಲಯದ ಉದ್ಯಮಗಳು ಸಹಿ ಹಾಕಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ (Defense Minister Rajnath Singh)ನಡೆದ ‘ಬಂಧನ್’ ಕಾರ್ಯಕ್ರಮದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಪ್ರಕಟಿಸಲಾಯಿತು.
ಪ್ರಮುಖವಾಗಿ ಹೆಲಿಕಾಪ್ಟರ್ ವಿನ್ಯಾಸ ಅಭಿವೃದ್ಧಿ ಮತ್ತು ಉತ್ಪಾದನೆಗೆ ಸಂಬಂಧಿಸಿದಂತೆ ಎಚ್‌ಎಎಲ್ (HAL) ಹಾಗೂ ಫ್ರಾನ್ಸ್‌ನ (France)ಸಫ್ರಾನ್ ಹೆಲಿಕಾಪ್ಟರ್ ಇಂಜಿನ್ ಸಂಸ್ಥೆಯೊಂದಿಗೆ (Saffron Helicopter Engine Company) ಒಡಂಬಡಿಕೆ, ಬಿಇಎಲ್ (BEL) ಮತ್ತು ಎಡಿಎ ನಡುವೆ ಸುಧಾರಿತ ಮಧ್ಯಮ ಯುದ್ಧ ವಿಮಾನಗಳಿಗೆ ಐಡಬ್ಲ್ಯೂಬಿಸಿ ಮತ್ತು ಇತರ ಎಲ್‌ಆರ್‌ಯುಗಳಿಗೆ ಸಂಬಂಧಿಸಿದಂತೆ ಒಪ್ಪಂದ, ಭಾರತದಲ್ಲಿ ಖಾಸಗಿ ಕಂಪನಿಯಿಂದ ಮೊದಲನೇ ಪ್ರಯಾಣಿಕ ವಿಮಾನವನ್ನು ತಯಾರಿಸಲು ಮತ್ತು ಜೋಡಿಸಲು ಗೋಪಾಲನ್ ಏರೋಸ್ಪೇಸ್ ಇಂಡಿಯಾ ಕಂಪನಿಯೊಂದಿಗೆ ಜೆಕ್ ರಿಪಬ್ಲಿಕ್‌ನ (Czech Republic)ಓಮ್ನಿಪೋಲ್ ಸಂಸ್ಥೆ ಒಪ್ಪಂದ ಹಾಕಿದೆ.
ಇದೇ ವೇಳೆ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಉತ್ಪಾದಿತ ವಿಎಲ್‌ಎಸ್‌ಆರ್‌ಎಸ್‌ಎಎಂ ಕ್ಷಿಪಣಿ( VLSRSAM missile), ಡ್ರೋನ್ ಆಧಾರಿತ ಕ್ಷಿಪಣಿ ಬಿಡುಗಡೆ ಮಾಡಲಾಯಿತು. ಬಿಇಎಲ್‌ನ ಸುಧಾರಿತ ಸಾಫ್ಟ್‌ವೇರ್ ಆಧಾರಿತ ರೇಡಿಯೋ, ಡಿಆರ್‌ಡಿಒನ (DRDO) ಕೌಂಟರ್ ಡ್ರೋನ್ ರಾಡಾರ್ ಸೇರಿದಂತೆ ವಿವಿಧ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraja Bommai), ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಮುರುಗೇಶ್ ನಿರಾಣಿ, ರಕ್ಷಣಾ ಇಲಾಖೆಯ ಕಾರ್ಯದರ್ಶಿ ಗಿರಿಧರ್ ಅರಮಾನೆ, ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್, ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಉಪಸ್ಥಿತರಿದ್ದರು.
ಏರೋ ಇಂಡಿಯಾಕ್ಕೆ ಕರ್ನಾಟಕ ಉತ್ತಮ ಸ್ಥಳ
ದೇಶದ ಆರ್ಥಿಕ ಪ್ರಗತಿಗೆ ನಿರಂತರವಾಗಿ ಕೊಡುಗೆ ನೀಡುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಏರೋ ಇಂಡಿಯಾವನ್ನು ಆಯೋಜಿಸಲು ಕರ್ನಾಟಕಕ್ಕಿಂತ ಉತ್ತಮವಾದ ಸ್ಥಳ ಬೇರೊಂದಿಲ್ಲ. ದೃಢವಾದ ಸಂಶೋಧನೆ ಮತ್ತು ಅಭಿವೃದ್ಧಿ ಉತ್ಪಾದನಾ ಪರಿಸರ ವ್ಯವಸ್ಥೆಯೊಂದಿಗೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಕೈಗಾರಿಕೆಗಳನ್ನು ಕರ್ನಾಟಕ ಆಕರ್ಷಿಸಿದೆ. ಏರೋ ಇಂಡಿಯಾ ನವ ಭಾರತದ ಹೊಸ ರಕ್ಷಣಾ ವಲಯವನ್ನು ಜಗತ್ತಿಗೆ ಪ್ರದರ್ಶಿಸಿದೆ.