ಕಾಂಗ್ರೆಸ್ ಅವಧಿಯಲ್ಲೇ ಹೆಚ್ಚು ಟೆಂಡರ್ ಹಗರಣ: ಸಿಎಂ ಬೊಮ್ಮಾಯಿ
ಬೆಂಗಳೂರು (ಫೆ.16): ಕಾಂಗ್ರೆಸ್ ನಾಯಕರು ಮೊದಲು ತಮ್ಮ ಸರ್ಕಾರದ ಅವಧಿಯಲ್ಲಿನ ಟೆಂಡರ್ ಹಗರಣಗಳ ಬಗ್ಗೆ ಉತ್ತರ ಕೊಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಯಾವುದಾದರೂ ಸರ್ಕಾರ ದಾಖಲೆಯ ಭ್ರಷ್ಟಾಚಾರ ಮಾಡಿದ್ದರೆ, ಅದು 2013ರಿಂದ 2018ರ ಅವಧಿಯ ಕಾಂಗ್ರೆಸ್ ಸರ್ಕಾರ ಎಂದೂ ಅವರು ಆಪಾದಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿಂದಿನ ಹಗರಣಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಕಾಂಗ್ರೆಸ್‌ನವರು ಹಿಂದೆ ಮಾಡಿರುವ ಕರ್ಮಕಾಂಡವನ್ನು ನೆನಪು ಮಾಡಿಕೊಂಡು ಮಾತನಾಡುತ್ತಾರೆ. ಯಾವ ಗುತ್ತಿಗೆಯನ್ನೂ ಮಾಡಬೇಡಿ, ಮುಂದೆ ಅಧಿಕಾರಕ್ಕೆ ಬಂದು ತನಿಖೆ ಮಾಡಿಸುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ. ಇದರ ಅರ್ಥ ಏನೆಂದರೆ ಅಧಿಕಾರಕ್ಕೆ ಬಂದರೆ ಸುಲಿಗೆ ಮಾಡಲು ಬರುತ್ತಿದ್ದಾರೆ ಎನ್ನುವುದು ಬಹಳ ಸ್ಪಷ್ಟವಾಗಿದೆ. ಅವರ ಅಜೆಂಡಾ ಅವರೇ ಹೇಳಿಕೊಂಡಿದ್ದಾರೆ ಎಂದರು.
ಗಾಳಿಯಲ್ಲಿ ಗುಂಡು ಬೇಡ: 40 ಪರ್ಸೆಂಟ್ ಕಮಿಷನ್ ಆರೋಪ ಯಾವುದೂ ನಿರೂಪಿತವಾಗಿಲ್ಲ. ನ್ಯಾಯಾಲಯದಲ್ಲಿ ಸಾಕ್ಷ್ಯ ಕೊಡುವುದಾಗಿ ಹೇಳಿದ್ದು, ಇನ್ನೂ ಕೊಟ್ಟಿಲ್ಲ. ಅವರು ಎಲ್ಲಿ ಬೇಕಾದರೂ ನಿರ್ದಿಷ್ಟಪ್ರಕರಣ ದಾಖಲು ಮಾಡಿದರೆ ತನಿಖೆಯಾಗುತ್ತದೆ. ಅದನ್ನು ಮಾಡುವುದು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದರೆ ಏನೂ ಪ್ರಯೋಜನವಿಲ್ಲ ಎಂದು ತೀಕ್ಷ$್ಣವಾಗಿ ಹೇಳಿದರು.
ಸರಣಿ ಹಗರಣ: ಕಾಂಗ್ರೆಸ್ ಪಕ್ಷದವರು ಅಕ್ಕಿಯಲ್ಲಿ, ಹಾಸಿಗೆ-ದಿಂಬು, ಬಿಡಿಎ, ಸಣ್ಣ ನೀರಾವರಿ, ಬೃಹತ್ ನೀರಾವರಿ, ಸೋಲಾರ್ ಸೇರಿದಂತೆ ಎಲ್ಲದರಲ್ಲೂ ಭ್ರಷ್ಟಾಚಾರ ನಡೆಸಿದರು. ಆ ಭ್ರಷ್ಟಾಚಾರ ಮುಚ್ಚಿ ಹಾಕಲು ಸಂವಿಧಾನಬದ್ಧವಾದ ಲೋಕಾಯುಕ್ತವನ್ನು ಬಂದ್ ಮಾಡಿ ಎಸಿಬಿ ರಚನೆ ಮಾಡಿದರು. ಅನೇಕ ಪ್ರಕರಣಗಳನ್ನು ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ. ನ್ಯಾಯಾಲಯದ ಆದೇಶದ ಮೇಲೆ ನಾವು ಮತ್ತೆ ಲೋಕಾಯುಕ್ತವನ್ನು ಪ್ರಾರಂಭ ಮಾಡಿದ್ದೇವೆ. ಅವರ ಮೇಲಿನ ಆರೋಪಗಳು ಒಂದೊಂದಾಗಿ ಲೋಕಾಯುಕ್ತಕ್ಕೆ ಹೋಗುತ್ತಿವೆ. ದಾಖಲೆ ಸಮೇತವಾಗಿ ದೂರುಗಳು ದಾಖಲಾಗಿದೆ. ಅದರ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುವುದಿಲ್ಲ. ಲೋಕಾಯುಕ್ತದಿಂದ ತನಿಖೆಯಾದರೆ ಅವರ ಕರ್ಮಕಾಂಡ ಹೊರಗೆ ಬರುತ್ತದೆ ಎಂದು ಸುಪ್ರೀಂ ಕೊರ್ಚ್ ನ್ಯಾಯಾಧೀಶರಿಂದ ತನಿಖೆ ಮಾಡಿಸುವಂತೆ ಒತ್ತಾಯ ಮಾಡುತ್ತಾರೆ. ಇದನ್ನು ನಾವು ಜನರ ಮುಂದೆ ತೆಗೆದುಕೊಂಡು ಹೋಗಬೇಕು ಎಂದರು.
ಪಾರದರ್ಶಕ ಟೆಂಡರ್: ನಮ್ಮ ಮೇಲಿನ ಆರೋಪಕ್ಕೆ ಯಾವುದೇ ಒಂದು ಪುರಾವೆ ಕೊಟ್ಟರೆ, ನಿಷ್ಪಕ್ಷಪಾತವಾಗಿ ನಾವು ತನಿಖೆ ಮಾಡಿಸುತ್ತೇವೆ. ಭ್ರಷ್ಟಾಚಾರ ತಡೆಯಲು ಟೆಂಡರ್ ಪರಿಶೀಲನಾ ಸಮಿತಿ ರಚನೆ ಮಾಡಿದ್ದೇವೆ. ಅಲ್ಲಿ ಅದರ ಪರಿಶೀಲನೆ ಆಗುತ್ತದೆ. ಪಾರದರ್ಶಕವಾಗಿ ನಾವು ವ್ಯವಸ್ಥೆಗಳನ್ನು ರೂಪಿಸಿದ್ದೇವೆ. ನೀರಾವರಿ ನಿಗಮದಲ್ಲಿ ನಾವು ರಚನೆ ಮಾಡಿದ್ದ ಸಮಿತಿಗಳನ್ನು ರದ್ದು ಮಾಡಿ ಭ್ರಷ್ಟಾಚಾರಕ್ಕೆ ರಹದಾರಿ ಮಾಡಿದ್ದೀರಿ ಎಂದು ಕಿಡಿಕಾರಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಶಾಸಕ ಗೂಳಿಹಟ್ಟಿ ಶೇಖರ್ ಅವರು ಸಾಮಾನ್ಯವಾಗಿ ಪತ್ರ ಬರೆದಿದ್ದಾರೆ. ನಾವು ಅವರಿಗೆ ಪತ್ರ ಮುಖೇನ ನಿರ್ದಿಷ್ಟ ಪ್ರಕರಣವಿದ್ದರೆ ನೀಡಲಿ ತನಿಖೆ ಮಾಡುತ್ತೇವೆ ಎಂದು ಕೇಳುತ್ತಿದ್ದೇವೆ. ನಿನ್ನೆ ಸದನದಲ್ಲಿಯೂ ಸ್ಪಷ್ಟವಾಗಿ ಕೇಳಿದ್ದೇವೆ. ಯಾವುದಾದರೂ ಅಧಿಕಾರಿ ಯಾವುದೇ ಹಂತದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ತನಿಖೆ ಮಾಡುತ್ತೇವೆ ಎನ್ನುವುದು ನಮ್ಮ ನಿಲುವಾಗಿದೆ ಎಂದರು.