ಅಡಿಕೆಯ ಕನಿಷ್ಠ ಆಮದು ದರ ಹೆಚ್ಚಿಸಿದ ಕೇಂದ್ರ : ಕ್ಯಾಂಪ್ಕೋ ಶ್ಲಾಘನೆ
ಮಂಗಳೂರು : ಫೆ 15 : ಅಡಿಕೆಯ ಕನಿಷ್ಠ ಆಮದು ಬೆಲೆ(MIP)ಯನ್ನು ರೂಪಾಯಿ ನೂರು ಹೆಚ್ಚಳಗೊಳಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಅಡಿಕೆ ಬೆಳೆಗಾರರ ಹಿತ ರಕ್ಷಕ ಕ್ಯಾಂಪ್ಕೊ ಸಂಸ್ಥೆಯ ಆಡಳಿತ ಮಂಡಳಿ ಸ್ವಾಗತಿಸಿದೆ ಹಾಗೂ ಕೇಂದ್ರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ.
ಬುಧವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ, ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿಯವರು “ಅಡಿಕೆಯ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕೆಂದ್ರ ಸರಕಾರ ಅಡಿಕೆಯ ಕನಿಷ್ಠ ಆಮದು ಬೆಲೆ(MIP)ಯನ್ನು ಈಗ ಇರುವ ಕೆಜಿಗೆ 251 ರೂ.ಗಳಿಂದ 351 ರೂಪಾಯಿಗಳಿಗೆ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಅಡಿಕೆ ಬೆಳೆಗಾರರ ಹಿತ ರಕ್ಷಕ ಕ್ಯಾಂಪ್ಕೊ ಸಂಸ್ಥೆಯ ಆಡಳಿತ ಮಂಡಳಿ ಕೇಂದ್ರ ಸರಕಾರದ ಕ್ರಮಕ್ಕೆ ಕೃತಜ್ಞತೆ ಸಲ್ಲಿಸುತ್ತಿದೆ ” ಎಂದರು.
ಕೆಲವು ತಿಂಗಳುಗಳಿಂದ ಏರಿಳಿತದ ಮೂಲಕ ಮಾರುಕಟ್ಟೆಯಲ್ಲಿ ಅಡಿಕೆಯ ದರ ಅನಿಶ್ಚಿತತೆಯಿಂದ ಕೂಡಿತ್ತು ಮತ್ತು ರೈತರಲ್ಲಿ ಹತಾಶೆಯ ಭಾವನೆಯನ್ನು ಮೂಡಿಸಿತ್ತು. ಆದರೇ ಕೇಂದ್ರದ ಸಕಾಲಿಕ ಕ್ರಮದಿಂದಾಗಿ ಕಳಪೆ ಗುಣಮಟ್ಟದ ವಿದೇಶಿ ಅಡಿಕೆಯ ಆಮದಿನ ಮೇಲೆ ಭಾರಿ ಹೊಡೆತ ಬೀಳಲಿದ್ದು, ಉತ್ತಮ ಗುಣಮಟ್ಟದ ದೇಶೀ ಅಡಿಕೆಗೆ ಬೇಡಿಕೆ ಬರಲಿದೆ ಮತ್ತು ದರದಲ್ಲಿ ಸ್ಥಿರತೆ ಕಾಣಲಿದ್ದು ಅಡಿಕೆ ಮಾರುಕಟ್ಟೆ ಚೇತರಿಕೆಯಾಗಲಿದೆ.
ಕರ್ನಾಟಕ ರಾಜ್ಯ ಗೃಹ ಸಚಿವರಾದ ಆರಗ ಜ್ಯಾನೇಂದ್ರ ರ ನೇತೃತ್ವದಲ್ಲಿ ಕ್ಯಾಂಪ್ಕೊ, ಮ್ಯಾಮ್ಕೊಸ್, ಟಿ ಎಸ್ ಎಸ್, ತುಮ್ಕೋಸ್ ,ಅಡಿಕೆ ಮಾರಾಟ ಮಹಾಮಂಡಳಿ ಮತ್ತು ಸಹಕಾರಿ ರಂಗದ ಹಿರಿಯರಾದ ಮಂಜಪ್ಪ ಹೊಸಬಾಳೆ ಹಾಗೂ ಸಹಕಾರ ಭಾರತೀಯ ರಾಷ್ಟ್ರೀಯ ನಾಯಕರಾದ ರಮೇಶ್ ವೈದ್ಯ ಮುಂತಾದ ಸದಸ್ಯರನ್ನೊಳಗೊಂಡ ನಿಯೋಗವು ದೆಹಲಿಗೆ ತೆರಳಿ ಆಮದು ಕನಿಷ್ಠ ಬೆಲೆಯನ್ನು ಹೆಚ್ಚಿಸುವಂತೆ ಕೃಷಿ ಮತ್ತು ವಾಣಿಜ್ಯ ಸಚಿವರಲ್ಲಿ ಮನವಿಯನ್ನು ಮಾಡಿತ್ತು. ನಂತರದ ದಿನಗಳಲ್ಲಿ ಕ್ಯಾಂಪ್ಕೊದ ನಿರಂತರ ಸಂಪರ್ಕ ಮತ್ತು ಒತ್ತಡದ ಪರಿಣಾಮ ಕೇಂದ್ರ ಸರಕಾರ ಸ್ಪಂದಿಸಿ ಆದೇಶ ಹೊರಡಿಸಿದೆ.
ಕನಿಷ್ಠ ಆಮದು ಬೆಲೆಯನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಪುತ್ತೂರಿನಲ್ಲಿ ಕ್ಯಾಂಪ್ಕೊದ 5 ನೇ ಕೃಷಿ ಯಂತ್ರ ಮೇಳ ಉದ್ಘಾಟನಾ ಸಮಾರಂಭದಲ್ಲಿ ಘೋಷಣೆ ಮಾಡಿರುತ್ತಾರೆ. ಈಗ ತನ್ನ ಮಾತಿನಂತೆ ಕ್ರಮ ಕೈಗೊಂಡಿರುವ ಬಗ್ಗೆ ಕ್ಯಾಂಪ್ಕೋ ಹರ್ಷ ವ್ಯಕ್ತಪಡಿಸಿದೆ.
ಅಡಿಕೆಯ ಆಮದು ಬೆಲೆಯನ್ನು ಹೆಚ್ಚಿಸಿ ಅಡಿಕೆ ಬೆಳೆಗಾರನಿಗೆ ಬೆಂಬಲ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ,ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಷಾ ಮತ್ತು ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಹಾಗೂ ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಕ್ಯಾಂಪ್ಕೊ ಕೃತಜ್ಞತೆ ಸಲ್ಲಿಸುತ್ತದೆ ಎಂದು ತಿಳಿಸಿದ್ದಾರೆ.
ಅಡಿಕೆಯ ಕನಿಷ್ಠ ಆಮದು ಬೆಲೆಯ ಹೆಚ್ಚಳದಿಂದ ಅಡಿಕೆ ಮಾರುಕಟ್ಟೆ ಚೇತರಿಕೆಯಾಗಲಿದ್ದು ರೈತರು ಸುಳ್ಳು ಸುದ್ಧಿಗಳಿಗೆ ಕಿವಿಗೊಡದೆ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡಿ ಅಡಿಕೆ ಧಾರಣೆಯ ಸ್ಥಿರತೆಗೆ ಸಹಕಾರ ನೀಡುವಂತೆ ಕ್ಯಾಂಪ್ಕೊ ಆಡಳಿತ ಮಂಡಳಿಯೂ ರೈತರಲ್ಲಿ ಮನವಿ ಮಾಡಿದೆ.