ಅಮಿತ್ ಶಾ ಭೇಟಿ ಹಿನ್ನಲೆ ಪುತ್ತೂರು ವಲಯ ವ್ಯಾಪ್ತಿಯಲ್ಲಿ ಇಂದು ಮದ್ಯ ಮಾರಾಟ ಮಳಿಗೆ ಬಂದ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹಾಗೂ ಪುತ್ತೂರಿಗೆ ಇಂದು (ಫೆಬ್ರವರಿ 11) ಬಿಜೆಪಿ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಪುತ್ತೂರು ವಲಯ ವ್ಯಾಪ್ತಿಯಲ್ಲಿ ಇಂದು ಮದ್ಯದ ಅಂಗಡಿಗಳಿಗೆ ಹಾಗೂ ಮದ್ಯ ಮಾರಾಟಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರಕಾರ, ಇಂದು ಮಧ್ಯಾಹ್ನ 12ರಿಂದ ರಾತ್ರಿ 8ರವರೆಗೆ ಮದ್ಯ ಮಾರಾಟ ಮಾಡುವಂತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಯವರು ಈ ಆದೇಶ ಹೊರಡಿಸಿದ್ದಾರೆ.
ಪುತ್ತೂರಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಕೇಂದ್ರ ಸಚಿವ ಅಮಿತ್ ಶಾ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಪ್ರಬಲ ನಾಯಕರ ಹೆಸರಲ್ಲಿ ತನ್ನ ಭದ್ರಕೋಟೆಗಳನ್ನು ಉಳಿಸಿಕೊಳ್ಳುವ ಸಾಹಸ ಮಾಡುತ್ತಿರುವ ಬಿಜೆಪಿ ಕರಾವಳಿ ಜಿಲ್ಲೆಗೆ ಅಮಿತ್ ಶಾ ಭೇಟಿಗೆ ರತ್ನಗಂಬಳಿ ಹಾಸಿದೆ.
ಅಮಿತ್ ಶಾ ಮಂಗಳೂರು ಭೇಟಿ ವೇಳಾಪಟ್ಟಿ ಫೆಬ್ರುವರಿ 11, ಶನಿವಾರ ಮಧ್ಯಾಹ್ನ 2.15 ಕಣ್ಣೂರು ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮನ. ಮಧ್ಯಾಹ್ನ 2.45 ಕಣ್ಣೂರಿನಿಂದ ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಈಶ್ವರ ಮಂಗಲಕ್ಕೆ ಆಗಮನ. ಮಧ್ಯಾಹ್ನ 2.50 ಈಶ್ವರಮಂಗಲ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ ಮಧ್ಯಾಹ್ನ 3.35 ಹೆಲಿಕಾಪ್ಟರ್ ಮೂಲಕ ಈಶ್ವರ ಮಂಗಲದಿಂದ ಪುತ್ತೂರಿಗೆ ಆಗಮನ. ಮಧ್ಯಾಹ್ನ 3.40: ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಭಾಗಿ ಸಂಜೆ 6.00: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮನ ಸಂಜೆ 6:15 ರಿಂದ 8:00 : ಏರ್ಪೋರ್ಟ್ ಸಮೀಪ ಬಿಜೆಪಿ ಪ್ರಮುಖರೊಂದಿಗೆ ಆಂತರಿಕ ಸಭೆ ರಾತ್ರಿ 8:15 : ಮಂಗಳೂರು ಏರ್ಪೋರ್ಟ್ನಿಂದ ದೆಹಲಿಗೆ ಪ್ರಯಾಣ.
ಶಾ ಭೇಟಿ ಹಿನ್ನಲೆ ಸಂಚಾರದಲ್ಲಿ ಬದಲಾವಣೆ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮಂಗಳೂರು ನಗರಕ್ಕೆ ಆಗಮಿಸಿ ಏರ್ಪೋರ್ಟ್ ರಸ್ತೆಯಲ್ಲಿನ ಕೆಂಜಾರು ಸಮೀಪದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುವ ಕಾರಣ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೆ ಸುಮಾರು 4 ಗಂಟೆಯಿಂದ 9 ಗಂಟೆಯವರೆಗೂ ಕೆಂಜಾರು ಸಮೀಪದ ಏರ್ಪೋರ್ಟ್ ರಸ್ತೆಯಲ್ಲಿ ವಾಹನ ಹಾಗೂ ಜನಸಂದಣಿ ಜಾಸ್ತಿ ಇದ್ದು, ಸಂಚಾರ ವ್ಯತ್ಯಯ ಆಗಬಹುದಾದ ಕಾರಣ ಕೆಂಜಾರು ಸಮೀಪದ ರಸ್ತೆಯನ್ನು ಉಪಯೋಗಿಸಿ ಏರ್ಪೋರ್ಟ್ ಗೆ ಹೋಗುವವರು ಪರ್ಯಾಯ ರಸ್ತೆಯಾಗಿ ಮುಲ್ಕಿ -ಕಟೀಲ್ -ಬಜಪೆ ಮೂಲಕ ಏರ್ ಪೋರ್ಟ್ ಗೆ ಹೋಗಬಹುದು. ಇದಲ್ಲದೆ ಕುದುರೆಮುಖ ಜಂಕ್ಷನ್- ಜೋ ಕಟ್ಟೆ -ಪೊರ್ಕೊಡಿ -ಏರ್ ಪೋರ್ಟ್, ಇಂಡಸ್ಟ್ರಿಯಲ್ ಏರಿಯಾ -ಜೋಕಟ್ಟೆ -ಪೊರ್ಕೋಡಿ -ಏರ್ಪೋರ್ಟ್, ನಂತೂರು , ಬಿಕರ್ನ ಕಟ್ಟೆ- ಕೈಕಂಬ -ಏರ್ಪೋರ್ಟ್ ಈ ಮಾರ್ಗಗಳನ್ನು ಉಪಯೋಗಿಸಬೇಕಾಗಿ ಕೋರಲಾಗಿದೆ.