ಪ್ರಾಣಿಗಳ ರಕ್ಷಣೆಗೆ ಆ್ಯಂಬುಲೆನ್ಸ್ ಸೇವೆ ಶುರು ಮಾಡಿದ ಸಂಯುಕ್ತಾ ಹೊರನಾಡು

ಸಂಯುಕ್ತಾ ಹೊರನಾಡು ಪ್ರಾಣಿಗಳ ರಕ್ಷಣೆ, ಏಳಿಗೆಯ ಕನಸಿಟ್ಟುಕೊಂಡು ಪ್ರಾಣ ¶ೌಂಡೇಶನ್ ಎಂಬ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂಲಕ ಪ್ರಾಣಿಗಳ ರಕ್ಷಣೆಗೆ ಆ್ಯಂಬುಲೆನ್ಸ್ ಸೇವೆ ಶುರು ಮಾಡುತ್ತಿದ್ದಾರೆ. ಫೆ.14ರಂದು ಪ್ರಕಾಶ್ ರೈ ಈ ಆ್ಯಂಬುಲೆನ್ಸ್ ಸೇವೆ ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ವಾರದ ಎಲ್ಲಾ ದಿನ 24 ಗಂಟೆ ಕೆಲಸ ಮಾಡುವ ಸಹಾಯವಾಣಿಯನ್ನೂ ಆರಂಭಿಸಲಿದ್ದಾರೆ.
ನಟಿಯೊಬ್ಬರು ತನ್ನ ಸಮಯ ಮತ್ತು ತಾನು ದುಡಿದ ಹಣವನ್ನು ಪ್ರಾಣಿಗಳ ರಕ್ಷಣೆಗಾಗಿ ಬಳಸುತ್ತಿರುವ ಈ ವಿದ್ಯಮಾನ ಅಪರೂಪ ಮತ್ತು ಮಹತ್ವದ್ದು. ಅವರು ¶ೌಂಡೇಶನ್ನಿನ ಸುಮಾರು ಐದು ವರ್ಷಗಳ ಕಾರ್ಯಯೋಜನೆಯನ್ನು ಈಗಾಗಲೇ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಆ್ಯಂಬುಲೆನ್ಸ್ ಸೇವೆ ಮೂಲಕ ಅವರ ಕೆಲಸಗಳು ಆರಂಭವಾಗುತ್ತವೆ. ಸ್ನೇಹಿತರಾದ ಅನಿರುದ್ಧ, ಅದಿತಿ ನಾಗ್ ಅವರ ಜೊತೆ ನಿಂತಿದ್ದಾರೆ. ತಮ್ಮ ಕನಸಿನ ಕುರಿತು ಸಂಯುಕ್ತಾ ಹೊರನಾಡು ಮಾತುಗಳು ಇಲ್ಲಿವೆ-
ನಾನು ಗಮನಿಸಿದ ಹಾಗೆ ದಕ್ಷಿಣ ಬೆಂಗಳೂರಿನಲ್ಲಿ ಯಾವುದೇ ಪ್ರಾಣಿಗಳಿಗೆ ತೊಂದರೆಯಾದರೆ, ಬೀದಿಯಲ್ಲಿ ಬಿದ್ದು ನರಳಾಡುತ್ತಿದ್ದರೆ ತಕ್ಷಣದ ಸೇವೆ ಸಿಗುವುದಿಲ್ಲ. ಉತ್ತರ ಭಾಗದಿಂದ ಆ್ಯಂಬುಲೆನ್ಸ್ ಬಂದು ಆ ಪ್ರಾಣಿಗಳನ್ನು ಕರೆದುಕೊಂಡು ಹೋಗುವ ಹೊತ್ತಿಗೆ ತಡವಾಗಿರುತ್ತದೆ. ಅದಕ್ಕಾಗಿಯೇ ಯಾವುದೇ ಹೊತ್ತಿನಲ್ಲಿ ಕರೆ ಮಾಡಿದರೂ ದೊರಕುವ ಆ್ಯಂಬುಲೆನ್ಸ್ ಸೇವೆ ಆರಂಭಿಸುತ್ತಿದ್ದೇವೆ. ಸದ್ಯ ಬೆಂಗಳೂರಿನಲ್ಲಿ ಆರಂಭಿಸಿ ಮುಂದಿನ ದಿನಗಳಲ್ಲಿ ಬೇರೆ ಕಡೆಗೂ ಈ ಸೌಲಭ್ಯ ಒದಗಿಸುವ ಕನಸಿದೆ.
– ಬಾಲ್ಯದಿಂದಲೂ ನನಗೆ ಸ್ನೇಹಿತರು ಕಡಿಮೆ. ಮರ ಗಿಡ ಪ್ರಾಣಿ ಪಕ್ಷಿಗಳೇ ಹೆಚ್ಚು ಇಷ್ಟ. ನನಗೆ ಹಾವು ಎಂದರೆ ಭಯವಾಗುವುದಿಲ್ಲ. ಮನುಷ್ಯರಿಗಿಂತ ಹೆಚ್ಚು ಪ್ರಾಣಿಗಳೇ ನಂಗಿಷ್ಟ. ಆ ಪ್ರಾಣಿಗಳಿಗೆ ಕಷ್ಟಬಂದರೆ ನೋಡುವುದು ಕಷ್ಟವಾಗುತ್ತದೆ. ಅವುಗಳಿಗೆ ಕಿಂಚಿತ್ತಾದರೂ ನೆರವು ನನ್ನಿಂದ ದೊರಕಲಿ.
ಭಾರ್ಗವಿ ನಾರಾಯಣ್ ನೆನಪು
ಫೆ.14ಕ್ಕೆ ಭಾರ್ಗವಿ ನಾರಾಯಣ್ ತೀರಿಕೊಂಡು ಒಂದು ವರ್ಷ ಆಗಲಿದೆ. ಅವತ್ತೇ ತನ್ನ ಕನಸಿನ ಯೋಜನೆಯನ್ನು ಸಂಯುಕ್ತಾ ಆರಂಭಿಸುತ್ತಿದ್ದಾರೆ. ‘ನನಗೆ ಪ್ರಾಣಿಗಳು ಪ್ರೀತಿ. ಅಜ್ಜಿ ನನ್ನ ಇನ್ನೊಂದು ಪ್ರೀತಿ. ಅವರು ತೀರಿಕೊಂಡ ದಿನವೇ ಆ್ಯಂಬುಲೆನ್ಸ್ ಆರಂಭಿಸುತ್ತಿದ್ದೇವೆ. ಆ ಮೂಲಕ ನಾನು ಪ್ರೀತಿಯನ್ನು ಸಂಭ್ರಮಿಸುತ್ತಿದ್ದೇನೆ’ ಎನ್ನುತ್ತಾರೆ ಸಂಯುಕ್ತಾ.