ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು
ಅಂಕಾರ: ಟರ್ಕಿ (Turkey) ಮತ್ತು ಸಿರಿಯಾ (Syria) ಭಾರೀ ಭೂಕಂಪದಿಂದ ನಲುಗಿ ಹೋಗಿದೆ. ಸಾವಿರಾರು ಮಂದಿ ಸಾವನ್ನಪ್ಪಿದ್ದು, ಹಲವರು ಸಾವು- ನೋವಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಅಚ್ಚರಿಯ ಪ್ರಸಂಗವೊಂದು ನಡೆದಿದೆ.
ಹೌದು. ಕಟ್ಟಡದ ಅವಶೇಷಗಳಡಿ ಮಹಿಳೆಯೊಬ್ಬರು ಮಗುವಿನ ಜನ್ಮ ನೀಡಿದ್ದಾರೆ. ಮಗುವನ್ನು ರಕ್ಷಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣ (Social Media) ದಲ್ಲಿ ಸಖತ್ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ವ್ಯಕ್ತಿಯೊಬ್ಬ ನವಜಾತ ಶಿಶುವನ್ನು ಎತ್ತಿಕೊಂಡು ಓಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ವೀಡಿಯೊವನ್ನು ಸಿರಿಯಾದ ಅಲೆಪ್ಪೊದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ರಕ್ಷಿಸಲ್ಪಟ್ಟ ನಂತರ ನವಜಾತ ಗಂಡು ಶಿಶು (Boy Baby) ಬದುಕುಳಿದಿದೆ. ಆದರೆ ಅವಶೇಷಗಳ ಅಡಿಯಲ್ಲಿ ಜನ್ಮ ನೀಡಿದ ತಾಯಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದ ನಂತರ, ಮಂಗಳವಾರ ಮುಂಜಾನೆ 5.9 ತೀವ್ರತೆಯ ಭೂಕಂಪ ವರದಿಯಾಗಿದೆ. ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ಪ್ರಕಾರ ಮಧ್ಯ ಟರ್ಕಿಯಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪವು 2 ಕಿಮೀ ಆಳದಲ್ಲಿದೆ ಎಂದು ಇಎಂಎಸ್‍ಸಿ ತಿಳಿಸಿದೆ.
ಸೋಮವಾರ ಮುಂಜಾನೆ ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು 2,500ಕ್ಕೂ ಹೆಚ್ಚು ಜನರ ಹತ್ಯೆಗೆ ಕಾರಣವಾಯಿತು. ಟರ್ಕಿ ಸರ್ಕಾರದ ಪ್ರಕಾರ, ಕುಸಿದ ಕಟ್ಟಡಗಳ ಅವಶೇಷಗಳ ನಡುವೆ ರಕ್ಷಕರು ಬದುಕುಳಿದವರನ್ನು ಹುಡುಕುವುದನ್ನು ಮುಂದುವರಿಸಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ದೇಶವು ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿತು.