ಗ್ರಾಹಕರ ಅನುಮತಿ ಇಲ್ಲದೆ 4.92 ಕೋ. ರೂ ಹಣ ಬೇರೆಯವರ ಖಾತೆಗೆ ವರ್ಗಾವಣೆ! ಬ್ಯಾಂಕ್ ವ್ಯವಸ್ಥಾಪಕಿ ಬಂಧನ
ಬೆಂಗಳೂರು (ಜ.30) : ಗ್ರಾಹಕರ ಅನುಮತಿ ಇಲ್ಲದೆ 4.92 ಕೋಟಿ ರೂ;. ಹಣವನ್ನು ಬೇರೆಯವರ ಖಾತೆಗಳಿಗೆ ವರ್ಗಾವಣೆ ಮಾಡಿದ್ದ ಆರೋಪದಡಿ ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕಿಯನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಿಷನ್ ರಸ್ತೆಯ ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕಿ ಸಜೀಲಾ ಗುರುಮೂರ್ತಿ(Sajeela Gurumurthy) (34) ಬಂಧಿತ ಆರೋಪಿ. ಇವರಿಂದ 1 ಕಂಪ್ಯೂಟರ್, .23 ಲಕ್ಷ ಮೌಲ್ಯದ ಬಾಂಡ್ ಜಪ್ತಿ ಮಾಡಲಾಗಿದೆ. ಐಡಿಬಿಐ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ಎಸ್.ಎನ್.ಸಂಗಮೇಶ್ವರ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿ ಮೂಲದ ಸಜೀಲಾ ಹಲವು ವರ್ಷಗಳಿಂದ ನಗರದ ಭಾರತಿನಗರದಲ್ಲಿ ನೆಲೆಸಿದ್ದಾರೆ. ಐಡಿಬಿಐ ಮಿಷನ್ ರಸ್ತೆ ಶಾಖೆಯಲ್ಲಿ ವ್ಯವಸ್ಥಾಪಕಿ ಆಗಿದ್ದ ಅವರು 2022ರ ಜೂ.13ರಿಂದ ಡಿ.31ರವರೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ಬ್ಯಾಂಕಿನ ಪ್ರತಿಷ್ಠಿತ ಗ್ರಾಹಕರ ಖಾತೆಗಳಿಂದ ಅವರ ಅನುಮತಿ ಇಲ್ಲದೆ ಹಣವನ್ನು ತೆಗೆದು ಬೇರೆಯವರ ಹೆಸರಿನಲ್ಲಿ ಎಲ್‌ಐಸಿ ಬಾಂಡ್‌ಗಳಲ್ಲಿ ತೊಡಗಿಸಿದ್ದಾರೆ. ಬೇರೆಯವರ ಹೆಸರಿನಲ್ಲಿ .1.44 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಐಡಿಬಿಐ ಗಾಂಧಿನಗರ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ 2022ರ ಡಿ.23ರಂದು ಒಂದೇ ದಿನ ಗ್ರಾಹಕರ ಖಾತೆಯಿಂದ ಎಲ್‌ಐಸಿ ಬಾಂಡ್‌ಗಳನ್ನು ಖರೀದಿಸಲು ಅಕ್ರಮವಾಗಿ .4.92 ಕೋಟಿ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಹಣಕಾಸು ವರ್ಗಾವಣೆ ಸಂಬಂಧ ದಾಖಲೆಗಳನ್ನು ಕೋರಿ ಬ್ಯಾಂಕ್‌ಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾರ್ಗೆಟ್ ತಲುಪಲು ಅಕ್ರಮ ಹಣ ವರ್ಗ
ಐಡಿಬಿಐ ಬ್ಯಾಂಕ್ ಅಧಿಕಾರಿಗಳಿಗೆ ಎಲ್‌ಐಸಿ ಬಾಂಡ್‌ಗಳ ಮಾರಾಟಕ್ಕೆ ಗುರಿ ನಿಗದಿಪಡಿಸಲಾಗಿತ್ತು. ನಿಗದಿತ ಗುರಿ ತಲುಪಲು ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ಬೇರೆಯವರ ಖಾತೆಗೆ ವರ್ಗಾವಣೆ ಮಾಡಿ ಅವರ ಹೆಸರಿನಲ್ಲಿ ಎಲ್‌ಐಸಿ ಬಾಂಡ್‌ಗಳನ್ನು ಖರೀದಿಸಿದ್ದೆ. ಗ್ರಾಹಕರ ಅನುಮತಿ ಇಲ್ಲದೆ ವರ್ಗಾಣೆ ಮಾಡಿರುವ ಎಲ್ಲ ಹಣವನ್ನು ಎಲ್‌ಐಸಿ ಬಾಂಡ್‌ಗಳ ಮೇಲೆ ಹೂಡಿಕೆ ಮಾಡಿರುವುದಾಗಿ ಆರೋಪಿ ಸಜೀಲಾ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಳೆ. ಈ ಸಂಬಂಧ ಪರಿಶೀಲಿಸಿದ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಸಜೀಲ ಪೊಲೀಸರ ವಶಕ್ಕೆ:
ಗ್ರಾಹಕರ ಹಣಕ್ಕೆ ಕನ್ನ ಹಾಕಿ ತಲೆಮರೆಸಿಕೊಂಡಿದ್ದ ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕಿಯನ್ನ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಗಾಂಧಿನಗರ ಶಾಖೆಯಲ್ಲಿ ಬರೋಬ್ಬರಿ 18 ಕೋಟಿಗೂ ಹೆಚ್ಚು ಹಣ ದೋಖಾ ಮಾಡಿರುವ ಸಜೀಲ. ಲೆಕ್ಕ ಪರಿಶೋಧನೆ ವೇಳೆ ಸಜೀಲ ನಡೆಸಿರುವ ಕಳ್ಲಾಟ ಬಯಲಾಗಿದೆ. ಗಾಂಧಿನಗರ ಶಾಖೆ ಬ್ಯಾಂಕ್ ಮ್ಯಾನೇಜರ್ ದೂರು ಹಿನ್ನೆಲೆ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ.
₹5 ಕೋಟಿಯಷ್ಟು ಹಣವನ್ನು ವ್ಯಕ್ತಿಯೊಬ್ಬರಿಗೆ ನೀಡಿರುವುದಾಗಿ ಬಾಯಿಬಿಟ್ಟಿರುವ ಸಜೀಲ. ಉಳಿದ ಹಣ ಎಲ್‌ಐಸಿ ಬಾಂಡ್‌ಗಳಲ್ಲಿ ಇನ್ವೆಸ್ಟ್‌ಮೆಂಟ್ ಮಾಡಿರುವ ಕಳ್ಳಿ. 2022 ಮಾರ್ಚ್ 23 ರಿಂದ ಡಿಸೆಂಬರ್ 23 ರ ನಡುವೆ ಈ ವಂಚನೆ ನಡೆದಿರುವುದಾಗಿ ತಿಳಿಸಿದ್ದಾಳೆ. ಸದ್ಯ ಉಪ್ಪಾರಪೇಟೆ ಪೊಲೀಸರ ವಶದಲ್ಲಿರುವ ಸಜೀಲ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳ ಬಂಧನ ಸಾಧ್ಯತೆ.