ಕನ್ನಡ ಚಿತ್ರರಂಗದ ಹಿರಿಯ ನಟ ಮಂದೀಪ್ ರಾಯ್ ನಿಧನ
ಬೆಂಗಳೂರು: ಕನ್ನಡದ ಹಿರಿಯ ನಟ ಮಂದೀಪ್ ರಾಯ್ ಅವರು ಕೊನೆಯುಸಿರೆಳೆದಿದ್ದಾರೆ. 73 ವರ್ಷದ ಮಂದೀಪ್ ರಾಯ್ ಅವರಿಗೆ ಮಧ್ಯರಾತ್ರಿ 1.45ರ ಸುಮಾರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ.
ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಮಂದೀಪ್ ರಾಯ್ ಅವರು ಮೂಲತಃ ಮುಂಬೈನವರು. ಬಾಲ್ಯದಲ್ಲಿ ಕರಾಟೆ, ಕುಂಗ್ ಫು ಅಭ್ಯಾಸ ಮಾಡಿದ್ದ ಮಂದೀಪ್ ಅವರು ಒಂಬತ್ತನೇ ವಯಸ್ಸಿನಲ್ಲಿ ರಂಗಭೂಮಿ ಒಲವು ಮೂಡಿಸಿಕೊಂಡರು. ರಂಗಭೂಮಿಯಲ್ಲಿ ಪರಿಚಯವಾದ ಶಂಕರ್ ನಾಗ್ ಮತ್ತು ಅನಂತ್ ನಾಗ್ ಅವರ ಕಾರಣದಿಂದ ಮಂದೀಪ್ ರಾಯ್ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದರು.
ಕಂಪ್ಯೂಟರ್ ಸೈನ್ಸ್, ಆಟೋಮೊಬೈಲ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದ ಮಂದೀಪ್ ರಾಯ್, ನಂತರ ಐಬಿಎಂ ಹಾಗೂ ಟಿಸಿಎಸ್ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಈ ವೇಳೆ ಶಂಕರ್ ನಾಗ್ ಅವರ ನಿರ್ದೇಶನದ ‘ಮಿಂಚಿನ ಓಟ’ ಚಿತ್ರದಲ್ಲಿ ಮಂದೀಪ್ ಬಣ್ಣ ಹಚ್ಚಿದ್ದರು. ಒಂಚೂರು ಕನ್ನಡ ಭಾಷೆ ಬಾರದ ಮಂದೀಪ್ ರಾಯ್ ‘ಮಿಂಚಿನ ಓಟ’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದರು.
ಬಳಿಕ ಮಂದೀಪ್ ರಾಯ್ ಅವರು, ದೇವರ ಆಟ, ಬಾಡದ ಹೂ, ನನ್ನವರು, ಅಂತಿಮ ಘಟ್ಟ, ಏಳು ಸುತ್ತಿನ ಕೋಟೆ, ಆಕಸ್ಮಿಕ, ಅಗ್ನಿ ಐಪಿಎಸ್, ಅಯ್ಯ, ಹಢವಾದಿ, ಸಿಕ್ಸರ್, ಆಪ್ತರಕ್ಷಕ, ಅಲೆಮಾರಿ, ಪರಾರಿ, ಅಮಾನುಷ, ಪುಷ್ಪಕ ವಿಮಾನ, ರಾಜಕುಮಾರ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.