ವಿದ್ಯಾರ್ಥಿಗಳ ಬಾಳಲ್ಲಿ ಶಿಕ್ಷಣ ಸಂಸ್ಥೆಗಳ ಎಡವಟ್ಟು- ಫಲಿತಾಂಶ ಪ್ರಕಟ ವಿಳಂಬ, ವಿದ್ಯಾರ್ಥಿಗಳಿಗೆ ಆತಂಕ
ರಾಯಚೂರು: ಗುಲ್ಬರ್ಗಾ ವಿಶ್ವವಿದ್ಯಾಲಯ (Gulbarga University) ಸದಾ ಎಡವಟ್ಟುಗಳನ್ನ ಮಾಡುವುದರಲ್ಲಿ ಎತ್ತಿದ ಕೈ ಅನ್ನೊದನ್ನ ಮತ್ತೊಮ್ಮೆ ಸಾಬೀತು ಮಾಡಿದೆ. ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸುವುದರಲ್ಲಿ ವಿಳಂಬ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ನಡೆಸಿದೆ.
ಈ ವರ್ಷ ಪದವಿ ಮುಗಿಸಿರುವ ರಾಯಚೂರು ಸೇರಿದಂತೆ ಗುಲ್ಬರ್ಗಾ ವಿವಿ ಅಡಿ ಬರುವ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮಿಚ್ಚೆಯ ಕಾಲೇಜುಗಳಲ್ಲಿ ಬಿಎಡ್ ಹಾಗೂ ಸ್ನಾತಕೋತ್ತರ ಪದವಿಗೆ ಸೇರುವ ಅವಕಾಶ ಮಿಸ್ ಆಗಿದೆ. ಒಳ್ಳೆಯ ಅಂಕಪಡೆದಿದ್ದರೂ ಒಂದು ವರ್ಷ ಮನೆಯಲ್ಲೇ ಕುಳಿತಕೊಳ್ಳಬೇಕಾದ ಪರಸ್ಥಿತಿ ಎದುರಾಗಿದೆ. ಸರಿಯಾದ ಸಮಯಕ್ಕೆ ಫಲಿತಾಂಶ ನೀಡದ ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾಎಡವಟ್ಟೇ ಇದಕ್ಕೆ ಕಾರಣ. ರಾಯಚೂರಿನ ಡಯಟ್ ಸೇರಿ ವಿವಿಧ ಸರ್ಕಾರಿ ಕಾಲೇಜಿಗಳಿಗೆ ಬಿಎಡ್ ಗಾಗಿ ಅರ್ಜಿಹಾಕಿದ್ದ ವಿದ್ಯಾರ್ಥಿಗಳಿಗಳು 6ನೇ ಸೆಮಿಸ್ಟರ್ ಫಲಿತಾಂಶ ತಡವಾಗಿ ಬಂದಿದ್ದಕ್ಕೆ ಮೆರಿಟ್ ಲಿಸ್ಟ್ ನಲ್ಲಿ ಆಯ್ಕೆಯಾದ್ರೂ ದಾಖಲೆ ಪರಿಶೀಲನೆ ಸುತ್ತಿನಲ್ಲಿ ಸೀಟ್ ಕಳೆದುಕೊಂಡಿದ್ದಾರೆ.
ಜನವರಿ 11 ರವರೆಗೆ ದಾಖಲೆ ಪರಿಶೀಲನೆ ಅವಕಾಶ ನೀಡಲಾಗಿತ್ತು. ಆದರೆ ಜನವರಿ 16ಕ್ಕೆ ಫಲಿತಾಂಶ ಹೊರಬಂದಿದ್ದರಿಂದ ವಿದ್ಯಾರ್ಥಿಗಳ ದಾಖಲೆ ಮರುಪರಿಶೀಲನೆ ಮಾಡುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಡವಾಗಿ ಬಂದ 6ನೇ ಸೆಮಿಸ್ಟರ್ ಫಲಿತಾಂಶವನ್ನೂ ಪರಿಗಣಿಸಿ ಬಿಎಡ್ ಸಿಟ್ ಕೊಡುವಂತೆ ಒತ್ತಾಯಿಸಿದ್ದಾರೆ. ವಿವಿಯ ತಪ್ಪಿನಿಂದ ನಮಗೆ ಅನ್ಯಾಯವಾಗುತ್ತಿದೆ ಅಂತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮೆರಿಟ್ (Merit) ಆಧಾರದಲ್ಲಿ ಸರ್ಕಾರಿ ಸೀಟ್ ಪಡೆದರೆ 30 ಸಾವಿರದಲ್ಲಿ ಬಿಎಡ್ ಮುಗಿಯುತ್ತದೆ. ಆದರೆ ಪೇಮೆಂಟ್ ಸೀಟ್ ಪಡೆಯಬೇಕೆಂದರೆ ಪ್ರತೀ ವರ್ಷ 70 ರಿಂದ 80 ಸಾವಿರ ಭರಿಸಬೇಕು. ಉತ್ತಮ ಅಂಕಗಳನ್ನು ಪಡೆದು ಪೇಮೆಂಟ್ ಸೀಟ್ ಪಡೆಯಬೇಕಾದ ಪರಸ್ಥಿತಿಯನ್ನ ಸಾಕಷ್ಟು ಬಡ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಧಾರವಾಡ, ಮೈಸೂರು, ವಿಜಯನಗರ, ಬಿಜಾಪುರ ಸೇರಿ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳು ನವೆಂಬರ್, ಡಿಸೆಂಬರ್ ನಲ್ಲೆ ಫಲಿತಾಂಶ ಪ್ರಕಟಿಸಿವೆ. ಹೀಗಾಗಿ ಬೇರೆ ವಿವಿ ವಿದ್ಯಾರ್ಥಿಗಳಿಗೆ ಬಿಎಡ್ ಸೀಟ್ ಸಿಗುತ್ತಿದೆ. ಸ್ವತಃ ಗುಲ್ಬರ್ಗಾ ವಿವಿ ವಿದ್ಯಾರ್ಥಿಗಳಿಗೆ ಅವರ ವಿವಿ ವ್ಯಾಪ್ತಿಯಲ್ಲೂ ಸೀಟ್ ಸಿಗುತ್ತಿಲ್ಲ.
ದಾಖಲಾತಿ ಪರಿಶೀಲನೆಗೆ ಮತ್ತೊಮ್ಮೆ ಅವಕಾಶ ಕೊಡಬೇಕು. ಮೆರಿಟ್ ಆಧಾರದ ಮೇಲೆ ಸೀಟ್ ನೀಡಬೇಕು ಅಂತ ಬಿಎಡ್ ಆಕಾಂಕ್ಷಿ ವಿದ್ಯಾರ್ಥಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕಿದೆ.