ನಟಿ ರಾಖಿ ಸಾವಂತ್‌ರನ್ನು ಬಂಧಿಸಿದ ಮುಂಬೈ ಪೊಲೀಸರು!
ಬಾಲಿವುಡ್ ನಟಿ ರಾಖಿ ಸಾವಂತ್ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಂಡಿರುತ್ತಾರೆ. ಇದೀಗ ಈ ನಟಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಕೇಸ್‌ವೊಂದರಲ್ಲಿ ರಾಖಿ ಸಾವಂತ್‌ರನ್ನು ಮುಂಬೈನ ಅಂಬೋಲಿ ಪೊಲೀಸರು ಗುರುವಾರ (ಜ.19) ಅರೆಸ್ಟ್ ಮಾಡಿದ್ದಾರೆ. ಅದಕ್ಕೂ ಮುನ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಖಿ ಸಾವಂತ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ಬುಧವಾರ (ಜ.18) ವಿಚಾರಣೆ ನಡೆಸಿದ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಆ ಹಿನ್ನೆಲೆಯಲ್ಲಿ ಇಂದು ಅವರನ್ನು ಬಂಧಿಸಲಾಗಿದೆ.
ದೂರು ನೀಡಿದ್ದ ಶೆರ್ಲಿನ್ ಚೋಪ್ರಾ
ಕಳೆದ ವರ್ಷ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಶೆರ್ಲಿನ್ ಚೋಪ್ರಾ ಮೀಟೂ ಆರೋಪ ಮಾಡಿದ್ದರು. ಆ ಕುರಿತಂತೆ ತಮ್ಮ ಹೇಳಿಕೆಯನ್ನು ಹಂಚಿಕೊಂಡಿದ್ದ ಶೆರ್ಲಿನ್ ಚೋಪ್ರಾ, ಬಳಿಕ ಸಲ್ಮಾನ್ ಖಾನ್ ಅವರನ್ನು ದೂರಿದ್ದರು. ಈ ಪ್ರಕರಣದಲ್ಲಿ ಸಾಜಿದ್ ಖಾನ್‌ರನ್ನು ಸಲ್ಮಾನ್ ರಕ್ಷಿಸುತ್ತಿದ್ದಾರೆ ಎಂದಿದ್ದರು. ಆದರೆ ಈ ಪ್ರಕರಣದಲ್ಲಿ ಎಂಟ್ರಿ ಕೊಟ್ಟಿದ್ದ ರಾಖಿ ಸಾವಂತ್ ಶೆರ್ಲಿನ್ ಚೋಪ್ರಾ ಹೇಳಿಕೆಯನ್ನು ಖಂಡಿಸಿದ್ದರು ಮತ್ತು ಸಾಜಿದ್ ಖಾನ್ ಪರ ಬ್ಯಾಟ್ ಬೀಸಿದ್ದರು. ಆಗ ತಮ್ಮ ಮಾನಹಾನಿ ಆಗುವಂತೆ ಆಕ್ಷೇಪಾರ್ಹ ಭಾಷೆ ಬಳಸಿ ರಾಖಿ ಹೇಳಿಕೆ ನೀಡಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಟ್ವೀಟ್ ಮಾಡಿರುವ ಶೆರ್ಲಿನ್
ರಾಖಿ ಸಾವಂತ್ ಅರೆಸ್ಟ್‌ಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಶೆರ್ಲಿನ್, ‘ಬ್ರೇಕಿಂಗ್ ನ್ಯೂಸ್!! ಅಂಬೋಲಿ ಪೊಲೀಸರು FIR 883/2022 ಸಂಬಂಧಿಸಿದಂತೆ ರಾಖಿ ಸಾವಂತ್‌ರನ್ನು ಅರೆಸ್ಟ್ ಮಾಡಿದ್ದಾರೆ. ರಾಖಿ ಸಾವಂತ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್ ಕೋರ್ಟ್ ವಜಾ ಮಾಡಿದೆ..’ ಎಂದು ಬರೆದುಕೊಂಡಿದ್ಧಾರೆ.
ರಾಖಿ ಮದುವೆ ಸುದ್ದಿ ಬಹಿರಂಗ
ಈಚೆಗಷ್ಟೇ ರಾಖಿ ಸಾವಂತ್ ಅವರ ಮದುವೆ ಸುದ್ದಿ ಬಹಿರಂಗವಾಗಿತ್ತು. ಆದಿಲ್ ಜೊತೆಗೆ ರಾಖಿ ಸಾವಂತ್ 7 ತಿಂಗಳ ಹಿಂದೆಯೇ ಮದುವೆ ಆಗಿದ್ದಾರೆ. ‘ಆದಿಲ್ ಭೇಟಿಯಾಗಿ ಕೆಲ ತಿಂಗಳಾದ ನಂತರದಲ್ಲಿ ಮದುವೆ ಆಯಿತು. ಕಳೆದ ವರ್ಷ ಜುಲೈನಲ್ಲಿ ನಾನು ಮತ್ತು ಆದಿಲ್ ಮದುವೆಯಾದೆವು. ನಮ್ಮ ಮದುವೆ ಬಗ್ಗೆ ಗೊತ್ತಾದರೆ ತಂಗಿಗೆ ಹುಡುಗನನ್ನು ಹುಡುಕೋದು ಕಷ್ಟ ಅಂತ ಹೇಳಿದ್ರು. ರಾಖಿ ಸಾವಂತ್ ಜೊತೆ ಇದ್ದೇನೆ ಎಂದರೆ ಅದು ನಾಚಿಕೆ ಕೆಲಸ ಎಂದು ಆದಿಲ್ ಅಂದುಕೊಂಡಿದ್ದಾನೆ.. ನಾನು ಆದಿಲ್‌ರನ್ನು ಮದುವೆಯಾಗಿದ್ದೇನೆ ಎಂದು ಜಗತ್ತಿಗೆ ಹೇಳಬೇಕಿತ್ತು, ಆದರೆ ಹೇಳಲಾಗಲಿಲ್ಲ. ನಿಜಕ್ಕೂ ಆದಿಲ್ ಯಾಕೆ ನಮ್ಮ ಮದುವೆಯನ್ನು ಗುಟ್ಟಾಗಿ ಇಡುತ್ತಿದ್ದಾನೆ ಎಂದು ಅರ್ಥವಾಗುತ್ತಿಲ್ಲ. ಪಾಲಕರಿಗೆ ಹೆದರಿ ಅವನು ಸುಮ್ಮನಿದ್ದಾನಾ ಎಂಬುದು ಗೊತ್ತಿಲ್ಲ. ಹಿಂದು ಹುಡುಗಿಯನ್ನು ಮದುವೆಯಾದೆ ಅಂತ ಆದಿಲ್ ಈ ರೀತಿ ಮಾಡುತ್ತಿದ್ದಾನಾ ಎಂದು ಕೂಡ ಗೊತ್ತಿಲ್ಲ..’ ಎಂದು ಈಚೆಗಷ್ಟೇ ರಾಖಿ ಸಾವಂತ್ ಹೇಳಿಕೆ ನೀಡಿದ್ದರು
ಮದುವೆ ವಿಚಾರಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದ ರಾಖಿ ಸಾವಂತ್ ಈಗ ಶೆರ್ಲಿನ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯ ಅವರ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಕಡೆಗೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ರಾಖಿ ಸಾವಂತ್ ಹೈಡ್ರಾಮಾಗೆ ಫುಲ್ ಸ್ಟಾಪ್ ಇಟ್ಟ ಆದಿಲ್ ಖಾನ್ ದುರಾನಿ