ಕಾರು ಬಿಟ್ಟು ಮೆಟ್ರೋ ಹತ್ತಿ ಕಲ್ಯಾಣ ಮಂಟಪ ತಲುಪಿದ ಮದುಮಗಳು! ವಿಡಿಯೋ ವೈರಲ್
ಬೆಂಗಳೂರು: ಯಾವ್ಯಾವ ಕಾಲಕ್ಕೆ ಏನೇನು ಆಗ ಬೇಕೋ ಅದು ಆಗಲೇಬೇಕು ಎಂಬ ಮಾತಿದೆ. ಆದರೆ, ನಮ್ಮ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯು “ಆಗಬೇಕಾದ್ದನ್ನು ಸೂಕ್ತ ಕಾಲಕ್ಕೆ ಆಗದಂತೆ ಮಾಡಿದ’ ಎಷ್ಟೋ ಉದಾಹರಣೆಗಳಿವೆ. ತನ್ನ ಮದುವೆಗೆ ಈ ಸಮಸ್ಯೆ ಅಂಟಿಕೊಳ್ಳಬಾರದು ಎಂದು ನಿರ್ಧರಿಸಿದ ಯುವತಿಯೊಬ್ಬಳು, ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪ ತಲುಪಲು ಕಾರು ಬಿಟ್ಟು “ಮೆಟ್ರೋ’ ಹತ್ತಿದ್ದಾಳೆ!
ಹೌದು, ಬೆಂಗಳೂರಿನ ವಧು ರೇಷ್ಮೆ ಸೀರೆ, ಚಿನ್ನಾಭರಣ ತೊಟ್ಟು, ಮೇಕಪ್ ಮಾಡಿಕೊಂಡು ಮನೆ ಮಂದಿಯೊಂದಿಗೆ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದಳು. ಆದರೆ, ಆಕೆಯಿದ್ದ ಕಾರು ನಗರದ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿತು. ಈ ದಟ್ಟಣೆಯಲ್ಲಿ ಕಾದು ಕುಳಿತರೆ, ಮುಹೂರ್ತ ಮೀರಿ ಹೋಗುವುದು ಖಚಿತ ಎಂದು ಯೋಚಿಸಿದ ಆಕೆ, ಕಾರಿನಲ್ಲಿ ಇಳಿದು ನೇರವಾಗಿ ಮೆಟ್ರೋ ಹತ್ತಿಯೇ ಬಿಟ್ಟಳು. ಕುಟುಂಬ ಸದಸ್ಯರೂ ಆಕೆ ಯನ್ನು ಹಿಂಬಾಲಿಸಿದರು.
ಮೆಟ್ರೋ ದಲ್ಲಿ ವಧು ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿದೆ. ಆಕೆಯನ್ನು ಎಲ್ಲರೂ “ಸ್ಮಾರ್ಟ್ ಮದುಮಗಳು’ ಎಂದು ಕರೆದಿದ್ದಾರೆ. ಈ ವಿಡಿಯೋ ಅಪ್‌ಲೋಡ್ ಆದ ಕೆಲವೇ ಕ್ಷಣಗಳಲ್ಲಿ 3 ಸಾವಿರ ವೀಕ್ಷಣೆ ಗಳಿಸಿದೆ.