'ಗೃಹಿಣಿ ಶಕ್ತಿ ಯೋಜನೆ' ಜಾರಿಗೆ ಬೊಮ್ಮಾಯಿ ಸರ್ಕಾರ ಸಿದ್ಧತೆ!
ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಗೃಹಲಕ್ಷ್ಮೀ ಯೋಜನೆಗೆ ಸೆಡ್ಡು ಹೊಡೆಯಲು ರಾಜ್ಯದ ಆಡಳಿತಾರೂಢ ಬಿಜೆಪಿ ಪಕ್ಷವು ಗೃಹಿಣಿ ಶಕ್ತಿ ಯೋಜನೆ ಜಾರಿಗೆ ಸಜ್ಜಾಗುತ್ತಿದೆ ಎಂದು ತಿಳಿದುಬಂದಿದೆ.
ಕಂದಾಯ ಸಚಿವ ಆರ್.ಅಶೋಕ್ ಅವರ ಹೇಳಿಕೆ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಗೃಹಿಣಿ ಶಕ್ತಿ ಯೋಜನೆ ಅಡಿಯಲ್ಲಿ 2000 ರೂ ನೀಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದರು,
ಈಗಾಗಲೇ ಅಸ್ಸಾಂ ಸರ್ಕಾರ ಇದೇ ರೀತಿಯ ಯೋಜನೆಯನ್ನು ಜಾರಿಗೆ ತಂದಿದ್ದು, ಅದನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಯೋಜನೆಗೆ ಗೃಹಿಣಿ ಶಕ್ತಿ ಎಂಬ ಹೆಸರನ್ನು ನೀಡಲಾಗಿದೆ. ಯೋಜನೆಯನ್ನು ಅಂತಿಮಗೊಳಿಸಲು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ರಾಜ್ಯ ಸರಕಾರ ಬಡ ಕುಟುಂಬಗಳಿಗೆ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ, ಆರೋಗ್ಯ ಕಾಪಾಡಲು ಈಗಾಗಲೇ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಇದರೊಂದಿಗೆ “ಗೃಹಿಣಿ ಶಕ್ತಿ’ ಯೋಜನೆ ಜಾರಿ ಮಾಡಿದಲ್ಲಿ ಬಡಕುಟುಂಬಗಳಿಗೆ ಸಹಾಯ ಮಾಡಿದಂತಾಗುತ್ತದೆ. ಅಸ್ಸಾಂ ಸರ್ಕಾರವು ಈಗಾಗಲೇ ಇದೇ ರೀತಿಯ ಯೋಜನೆಯನ್ನು ಜಾರಿಗೆ ತಂದಿದೆ, ಅದನ್ನು ಅಧ್ಯಯನ ಮಾಡಿ ರಾಜ್ಯದಲ್ಲಿ ಜಾರಿಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಅತಿ ಉತ್ಸಾಹ ಮಿತ್ರರು ಎಂದು ಹೇಳುತ್ತೇವೆ. ಉತ್ಸಾಹದಲ್ಲಿ ಕೆಲ ಹೇಳಿಕೆ ನೀಡುತ್ತಾರೆ, ಯತ್ನಾಳ್ ಅವರ ವಿಚಾರವನ್ನು ದೆಹಲಿಯವರಿಗೆ ತಿಳಿಸಿದ್ದೇನೆ. ಹೈಕಮಾಂಡ್‌ನವರು ಅವರನ್ನು ಕರೆಸಿ ಮಾತನಾಡಿ ಸರಿಪಡಿಸುತ್ತಾರೆ’ ಎಂದರು.
ಪಂಚಮಸಾಲಿ ಸಮುದಾಯದ ಮೀಸಲಾತಿ ಕುರಿತು ಮಾತನಾಡಿದ, ‘ಮೀಸಲಾತಿ ವಿಚಾರದಲ್ಲಿ ಗೊಂದಲಗಳಿಲ್ಲ. ಮಧ್ಯಂತರ ವರದಿಯನ್ನು ಸಚಿವ ಸಂಪುಟದ ಮುಂದೆ ಇಟ್ಟಿದ್ದೇವೆ. ಅಂತಿಮ ವರದಿ ನಂತರ ಸ್ಪಷ್ಟ ಚಿತ್ರಣ ಲಭಿಸುತ್ತದೆ’ ಎಂದು ಹೇಳಿದರು.