Nepal Plane Crashː ನಾಲ್ವರು ಭಾರತೀಯರು ಸೇರಿ ಮೃತರ ಸಂಖ್ಯೆ 68ಕ್ಕೆ ಏರಿಕೆ, ಇಂದು ರಾಷ್ಟ್ರೀಯ ಶೋಕಾಚರಣೆ

ಕಠ್ಮಂಡು: ನೆರೆರಾಷ್ಟ್ರ ನೇಪಾಳದಲ್ಲಿ (Nepal) ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ (Nepal Plane Crash) ನಾಲ್ವರು ಭಾರತೀಯರು ಸೇರಿದಂತೆ ಒಟ್ಟು ಮೃತಪಟ್ಟವರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. ಮೃತರಿಗೆ ಸಂತಾಪ ಸೂಚಿಸಲು ಜನವರಿ 16ರಂದು ನೇಪಾಳದಲ್ಲಿ ರಾಷ್ಟ್ರೀಯ ಶೋಕದಿನ ಆಚರಿಸಲಾಗುತ್ತಿದೆ.
ಯೇತಿ ಏರ್‌ಲೈನ್ಸ್‌ನ (Yeti Airlines) ಈ ವಿಮಾನದಲ್ಲಿ ನಾಲ್ವರು ಸಿಬ್ಬಂದಿ, ಐವರು ಭಾರತೀಯರು, 10 ವಿದೇಶಿಗರು ಸೇರಿ 72 ಜನ ಪ್ರಯಾಣಿಕರಿದ್ದರು. ದುರಂತದಲ್ಲಿ ಐವರಲ್ಲಿ ನಾಲ್ವರು ಭಾರತೀಯರು ಸೇರಿ 68 ಜನ ಸಾವನ್ನಪ್ಪಿದ್ದಾರೆ. ಓರ್ವ ಭಾರತೀಯ ಪತ್ತೆಯಾಗಿಲ್ಲ. ಇದರಲ್ಲಿ 9 ಮಕ್ಕಳು ಕೂಡ ಇದ್ದರು ಎಂಬುದು ತಿಳಿದುಬಂದಿದೆ.

ಇಬ್ಬರು ನೇಪಾಳಿಗರು ಜೀವನ್ಮರಣದ ಹೋರಾಟ ನಡೆಸ್ತಿದ್ದು, ಇಬ್ಬರ ಶವ ಪತ್ತೆಯಾಗಿಲ್ಲ. ರಾಜಧಾನಿ ಕಠ್ಮಂಡುವಿನಿಂದ ಟೇಕಾಫ್ ಆದ ಯೇತಿ ಏರ್‌ಲೈನ್ಸ್ ವಿಮಾನ ಪೋಖ್ರಾದಲ್ಲಿ ಲ್ಯಾಂಡಿಂಗ್ 2 ಕಿ.ಮೀ. ದೂರ ಇರುವಾಗ ಪತನವಾಗಿದೆ. 2 ನಿಲ್ದಾಣಗಳ ನಡುವೆ ಒಟ್ಟು 25 ನಿಮಿಷಗಳ ಪ್ರಯಾಣವಾಗಿದ್ದು, 20 ನಿಮಿಷಗಳ ಪ್ರಯಾಣ ಮಾಡಿದ್ದ ವಿಮಾನ ಲ್ಯಾಂಡಿಂಗ್ ಗೆ 5 ನಿಮಿಷ ಬಾಕಿ ಇರುವಾಗ ರನ್‌ವೇನಲ್ಲಿ ವಿಮಾನ ಪತನಗೊಂಡಿದೆ.

ಈ ವಿಮಾನದಲ್ಲಿ ಒಟ್ಟು 53 ನೇಪಾಳ, 5 ಭಾರತ, 4 ರಷ್ಯಾ, 2 ಕೊರಿಯಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಐರ್ಲೆಂಡ್ ಹಾಗೂ ಫ್ರಾನ್ಸ್ನ ತಲಾ ಒಬ್ಬರು ಪ್ರಜೆಗಳು ದುರ್ಮರಣಕ್ಕೀಡಾಗಿದ್ದಾರೆ. ಭಾರತೀಯರಾದ ಅಭಿಷೇಕ್ ಕುಶ್ವಾಹ, ಬಿಶಾಲ್ ಶರ್ಮಾ, ಅನಿಲ್ ಕುಮಾರ್ ರಾಜ್‌ಭರ್ , ಸೋನು ಜೈಸ್ವಾಲ್, ಸಂಜಯ್ ಜೈಸ್ವಾಲ್ ಸಜೀವ ದಹನಗೊಂಡಿದ್ದಾರೆ. ಘಟನೆಗೆ ನಿಖರ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಇದನ್ನು ಅರಿಯುವ ಪ್ರಯತ್ನವೂ ನಡೆದಿದೆ. ತಾಂತ್ರಿಕ ಕಾರಣವಾ ಅಥವಾ ಪೈಲಟ್ ನಿರ್ಲಕ್ಷö್ಯವಾ ಅನ್ನೋದು ಪರಿಶೀಲಿಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪ್ರಧಾನಿ ಪುಷ್ಪ ಕಮಲ್ ದಹಾಲ್ ಮತ್ತು ಗೃಹ ಸಚಿವ ರಬಿ ಲಮಿಚಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ವಿಮಾನ ಸಂಚಾರ ಬಂದ್ ಮಾಡಲಾಗಿದೆ. ನೇಪಾಳದಲ್ಲಿ 8 ತಿಂಗಳ ಅಂತರದಲ್ಲಿ 2ನೇ ಹಾಗೂ 30 ವರ್ಷಗಳಲ್ಲಿ ಅತಿದೊಡ್ಡ ದುರಂತ ಇದಾಗಿದೆ. ಮೃತರಿಗೆ ಸಂತಾಪ ಸೂಚಿಸಲು ಜನವರಿ 16ರಂದು ನೇಪಾಳ ಸರ್ಕಾರ ರಾಷ್ಟ್ರೀಯ ಶೋಕಾಚರಣೆ ದಿನವನ್ನಾಗಿ ಘೋಷಣೆ ಮಾಡಿದೆ. ಪ್ರಯಾಣದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
