ಸಚಿನ್ ತೆಂಡೂಲ್ಕರ್ ದಾಖಲೆ ಧೂಳಿಪಟ ಮಾಡಿದ ಕೊಹ್ಲಿ; ಭಾರತಕ್ಕೆ 317 ರನ್‌ಗಳ ಭರ್ಜರಿ ಗೆಲುವು - ವಿಶ್ವದಾಖಲೆ

ತಿರುವಂತಪುರಂ: ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದು 46ನೇ ಶತಕ ಸಿಡಿಸಿದ್ದಾರೆ.
ತಿರುವನಂತಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ಕೊಹ್ಲಿ ಶ್ರೀಲಂಕಾ ಬೌಲರ್ ಗಳನ್ನು ದಂಡಿಸಿದರು. 110 ಎಸೆತಗಳನ್ನು ಎದುರಿಸಿದ ಕೊಹ್ಲಿ ಅಜೇಯ 166 ರನ್ ಗಳಿಸಿದರು. ಈ ವೇಳೆ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 13 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿದರು. ಇದು ಕೊಹ್ಲಿ ಅವರ ಏಕದಿನ ವೃತ್ತಿ ಬದುಕಿನ 46ನೇ ಶತಕವಾಗಿದೆ. ಇನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಮುರಿಯಲು ಅವರು ಕೇವಲ ನಾಲ್ಕು ಹೆಜ್ಜೆ ದೂರದಲ್ಲಿದ್ದಾರೆ.
ವಿರಾಟ್ ತಮ್ಮ 46ನೇ ಶತಕದಿಂದಾಗಿ ಸಚಿನ್ ಅವರ ಎರಡು ದೊಡ್ಡ ದಾಖಲೆಗಳನ್ನು ನಾಶಪಡಿಸಿದ್ದಾರೆ. ಒಂದು ತಂಡದ ವಿರುದ್ಧ ಅತಿ ಹೆಚ್ಚು ಏಕದಿನ ಶತಕಗಳನ್ನು(10) ಮತ್ತು ತವರಿನಲ್ಲಿ(21) ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಕೊಹ್ಲಿ ಸಚಿನ್ ಅವರನ್ನು ಮೀರಿಸಿದ್ದಾರೆ.
ಮೂರನೇ ಏಕದಿನ ಪಂದ್ಯವನ್ನು 317 ರನ್‌ಗಳಿಂದ ಗೆಲ್ಲುವ ಮೂಲಕ ಭಾರತ ವಿಶ್ವದಾಖಲೆ ನಿರ್ಮಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದರ ಅತ್ಯಧಿಕ ಅಂತರದ ಗೆಲುವು ಎಂಬ ಹೆಗ್ಗಳಿಕೆಗೆ ಈಗ ಭಾರತ ಪಾತ್ರವಾಗಿದೆ.
ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಶತಕದಾಟ ನಂತರ ಸಿರಾಜ್ ಅವರ ಮಾರಕ ಬೌಲಿಂಗ್‌ಗೆ ತತ್ತರಿಸಿದ ಶ್ರೀಲಂಕಾ ಕೇವಲ 73 ರನ್‌ಗಳಿಗೆ ಪತನವಾಯಿತು. ಪಂದ್ಯವನ್ನು 317 ರನ್‌ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಗೆಲ್ಲಲು 391 ರನ್‌ಗಳ ಕಠಿಣ ಗುರಿಯನ್ನು ಪಡೆದ ಲಂಕಾ ಆರಂಭಿದಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ 22 ಓವರ್‌ಗಳಲ್ಲಿ 73 ರನ್‌ಗಳಿಗೆ ಪತನವಾಗಿ ಸೋಲನ್ನು ಒಪ್ಪಿಕೊಂಡಿತು. ಮೊಹಮ್ಮದ್ ಸಿರಾಜ್ 32 ರನ್ ನೀಡಿ 4 ವಿಕಟ್ ಪಡೆದರೆ ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಹೊಡೆದರು. ನಾಯಕ ರೋಹಿತ್ ಶರ್ಮಾ 42 ರನ್( 49 ಎಸೆತ, 2 ಬೌಂಡರಿ, 3 ಸಿಕ್ಸರ್), ಶುಭಮನ್ ಗಿಲ್ 116 ರನ್(97 ಎಸೆತ, 14 ಬೌಂಡರಿ, 2 ಸಿಕ್ಸರ್), ವಿರಾಟ್ ಕೊಹ್ಲಿ ಔಟಾಗದೇ 166 ರನ್(110 ಎಸೆತ, 13 ಬೌಂಡರಿ, 8 ಸಿಕ್ಸರ್), ಶ್ರೇಯಸ್ ಅಯ್ಯರ್ 38 ರನ್(32 ರನ್, 2 ಬೌಂಡರಿ, 1 ಸಿಕ್ಸರ್) ಹೊಡೆದರು.