ವಿಮಾನದಲ್ಲಿ ವೃದ್ಧನಿಗೆ ರಕ್ತಸ್ರಾವ ಬೆನ್ನಲೇ ತುರ್ತು ಭೂಸ್ಪರ್ಶ – ಚಿಕಿತ್ಸೆ ಫಲಿಸದೇ ಸಾವು
ಭೋಪಾಲ್: ಮಧುರೈನಿಂದ ದೆಹಲಿಗೆತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸಿದ ವೃದ್ಧ ಪ್ರಯಾಣಿಕನೊಬ್ಬನ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಇಂದೋರ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಆದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟ ಘಟನೆ ನಡೆದಿದೆ.
ನೋಯ್ಡಾ ನಿವಾಸಿಯಾದ ಅತುಲ್ ಗುಪ್ತಾ (60) ಮೃತ ಪ್ರಯಾಣಿಕ. ಅತುಲ್ ಗುಪ್ತಾ ಮಧುರೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು. ಆದರೆ ಆ ವೇಳೆ ಅವರಿಗೆ ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು. ಅಷ್ಟೇ ಅಲ್ಲದೇ ವಿಮಾನದಲ್ಲಿರುವಾಗಲೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಈ ಹಿನ್ನೆಲೆಯಲ್ಲಿ ಮಧುರೈನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು (IndiGo Flight) ವೈದ್ಯಕೀಯ ತುರ್ತು ಪರಿಸ್ಥಿಯ ಹಿನ್ನೆಲೆಯಲ್ಲಿ ಇಂದೋರ್‍ನ ದೇವಿ ಅಹಲ್ಯಾಬಾಯಿ ಹೋಳ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ನಂತರ ಅಲ್ಲೇ ಸಮೀಪವಿರುವ ಆಸ್ಪತ್ರೆಗೆ ಅತುಲ್ ಗುಪ್ತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಗುಪ್ತಾ ಸಾವನ್ನಪ್ಪಿರುವುದಾಗಿ ಘೋಷಿಸಿದರು.
ಗುಪ್ತಾ ಅವರನ್ನು ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಕರೆದೊಯ್ದ ವೈದ್ಯರು, ಗುಪ್ತಾ ಈಗಾಗಲೇ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದರು.