ಸುರತ್ಕಲ್: ಗುಡ್ಡ ಕುಸಿದು ಓರ್ವ ಕಾರ್ಮಿಕ ಮೃತ್ಯು, ಮತ್ತೋರ್ವ ಗಂಭೀರ
ಸುರತ್ಕಲ್, ಜ 14 : ಕೆಲಸ ಮಾಡುವಾಗ ಗುಡ್ಡ ಕುಸಿತ ಉಂಟಾಗಿ ಓರ್ವ ಕಾರ್ಮಿಕ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚೇಳೈರು ಗ್ರಾಮದ ಚೇಳೈರು ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ಓಬಲೇಶ್ವರ ಎಂದು ಗುರುತಿಸಲಾಗಿದೆ. ರೈಲ್ವೇ ಸೇತುವೆಯ ಮೇಲ್ಭಾಗದಲ್ಲಿ ಕಂಬಿಗಳನ್ನು ನೇರಮಾಡುತ್ತಿದ್ದ ಸಂದರ್ಭ ಕಾರ್ಮಿಕರು ಕೆಳಭಾಗದಲ್ಲಿ ಗುಡ್ಡ ಅಗೆಯುತ್ತಿದ್ದರು. ಈ ವೇಳೆ ರೈಲೊಂದು ಏಕಾಏಕಿ ಬಂದ ಹಾದುಹೋದ ಪರಿಣಾಮ ಮಣ್ಣು ಕುಸಿದು ಗುಡ್ಡದ ಕೆಳಭಾಗದಲ್ಲಿ ಅಗೆಯುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ.
ಈ ವೇಳೆ ಆರೇಳು ಕಾರ್ಮಿಕರ ಮೇಲೆ ಮಣ್ಣು ಬಿದ್ದಿದೆ. ಈ ಪೈಕಿ ಓಬಳೇಶ್ವರ ಮತ್ತು ಬಳ್ಳಾರಿಯ ಗೋವಿಂದಪ್ಪ ಅವರ ಮೈಮೇಲೆ ಹೆಚ್ಚಿನ ಪ್ರಮಾಣದ ಮಣ್ಣುಬಿದ್ದು ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ರಕ್ಷಿಸಿ ಖಾಸಗಿ ಆಸ್ಪತೆರೆಗ ದಾಖಲಿಸಲಾಗಿದ್ದು, ಈ ವೇಳೆ ಓಬಳೇಶ್ವರ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಗೋವಿಂದಪ್ಪ ಅವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಕಾರ್ಮಿಕರಾದ ಕಿಟ್ಟರಾಜ ಎಂಬವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.