ತನಗಿಂತ ಐದು ವರ್ಷ ದೊಡ್ಡವಳ ಜೊತೆ ಶಾರುಖ್ ಮಗನ ಡೇಟಿಂಗ್

ಬಿಟೌನ್ ನಲ್ಲಿ ಒಂದು ಕಡೆ ಶಾರುಖ್ ನಟನೆಯ ಪಠಾಣ್ ಸಿನಿಮಾದ ಸದ್ದಾಗುತ್ತಿದ್ದರೆ, ಮತ್ತೊಂದು ಕಡೆ ಶಾರುಖ್ ಪುತ್ರನ ಡೇಟಿಂಗ್ ವಿಚಾರ ಬಾಲಿವುಡ್ ನಲ್ಲಿ ಗಿರಿಕಿ ಹೊಡೆಯುತ್ತಿದೆ. ಅಪ್ಪ ಪಠಾಣ್ ಸಿನಿಮಾದ ವಿವಾದದಲ್ಲಿ ತಲೆಬಿಸಿ ಮಾಡಿಕೊಂಡಿದ್ದರೆ, ಮಗ ಕೂಲ್ ಕೂಲ್ ಆಗಿ ನಟಿ ನೋರಾ ಫತೇಹಿ ಜೊತೆ ಡೇಟಿಂಗ್ ನಡೆಸಿದ್ದಾನೆ.
ಅದು ತನಗಿಂತ ಐದು ವರ್ಷ ದೊಡ್ಡವಳಿರುವ ಹುಡುಗಿಯ ಜೊತೆ ಎನ್ನುವುದು ಚರ್ಚೆಗೆ ಕಾರಣವಾಗಿದೆ. ಈ ಜೋಡಿಯ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಸುದ್ದಿಗಳನ್ನು ಬಿತ್ತರಿಸುತ್ತಿವೆ.
ಕೆಲ ತಿಂಗಳ ಹಿಂದೆಯಷ್ಟೇ ಡ್ರಗ್ಸ್ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಶಾರುಖ್ ಖಾನ್ ಪುತ್ರ ಆರ್ಯನ್, ಇದೀಗ ಡೇಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೇವಲ 25ರ ವಯಸ್ಸಿನ ಈ ಹುಡುಗ 30ರ ಹರೆಯದ ನೋರಾ ಫತೇಹಿ ಜೊತೆ ಸುತ್ತುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ.
ಅನೇಕ ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ವಿಚಾರವನ್ನು ಬಹಿರಂಗಗೊಳಿಸಿದೆ ಈ ಜೋಡಿ. ಕೆಲವರು ಕೇವಲ ಇದು ಫ್ರೆಂಡ್ ಶಿಪ್ ಎಂದು ಹೇಳುತ್ತಿದ್ದರೆ, ಇನ್ನೂ ಹಲವರು ಫ್ರೆಂಡ್ ಶಿಪ್ ಮೀರಿದ ಸ್ನೇಹವಿದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ನನಗೆ ನಟನಾಗಲು ಇಷ್ಟವಿಲ್ಲ. ತಂದೆಯಂತೆ ನಾನು ನಟನಾಗಲಾರೆ. ನಟನೆ ಅಂದರೆ ನನಗೆ ಅಷ್ಟಕಷ್ಟೆ ಎಂದು ಅನೇಕ ಬಾರಿ ಹೇಳಿರುವ ಆರ್ಯನ್, ತಾನು ಪ್ರೀತಿಸುತ್ತಿರುವುದು ನಟಿಯನ್ನು ಅನ್ನುವುದು ವಿಶೇಷ. ಆದರೆ, ಈ ಕುರಿತು ಇಬ್ಬರೂ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೇ ಇದ್ದರೂ, ಬಿಟೌನ್ ನಲ್ಲಿ ಮಾತ್ರ ಈ ಸುದ್ದಿ ಭಾರೀ ಮಹತ್ವ ಪಡೆದುಕೊಂಡಿದೆ. ಇಬ್ಬರ ಮಧ್ಯೆ ಏನೋ ನಡೆದಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಆರ್ಯನ್ ಖಾನ್ ಭರ್ಜರಿಯಾಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಿರ್ದೇಶಕನಾಗಿ ಅವರು ಚಿತ್ರರಂಗಕ್ಕೆ ಪ್ರವೇಶ ಮಾಡಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೂಡ ರೆಡಿ ಮಾಡಿಕೊಂಡಿದ್ದಾರೆ. ನಿರ್ದೇಶನಕ್ಕೆ ಬೇಕಿರುವ ಅಗತ್ಯ ತರಬೇತಿಯನ್ನೂ ಅವರು ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ತಮ್ಮ ಸಿನಿಮಾದ ಮಾಹಿತಿಯನ್ನು ಅವರು ಹಂಚಿಕೊಳ್ಳಲಿದ್ದಾರೆ.