ಯಶ್ ಹೊಸ ಸಿನಿಮಾದ ಬಜೆಟ್ ಬರೋಬ್ಬರಿ 400 ಕೋಟಿ: ಜ.8ಕ್ಕೆ ಘೋಷಣೆ
ರಾಕಿಂಗ್ ಸ್ಟಾರ್ ಯಶ್ ಕುರಿತು ಮತ್ತೊಂದು ಮೆಗಾ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಯಶ್ ಅವರ ಮುಂದಿನ ಸಿನಿಮಾ ಕುರಿತು ಮತ್ತೊಂದು ಮಹತ್ವದ ಸುಳಿವು ಸಿಕ್ಕಿದ್ದು, ಈ ಸಿನಿಮಾ ಬರೋಬ್ಬರಿ 400 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆಯಂತೆ. ಇಂತಹ ಭಾರೀ ಬಜೆಟ್ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಲಿದೆ ಎಂದು ಹೇಳಲಾಗುತ್ತಿದೆ. ತಮಿಳು ನಿರ್ದೇಶಕರೊಬ್ಬರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಯಶ್ ಹುಟ್ಟು ಹಬ್ಬದ ದಿನದಂದು ಈ ಎಲ್ಲ ಮಾಹಿತಿ ಘೋಷಣೆ ಆಗುವ ಸಾಧ್ಯತೆ ಇದೆಯಂತೆ.
ಕೆಜಿಎಫ್ 2 ಸಿನಿಮಾದ ನಂತರ ಯಶ್ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಮುಂದಿನ ಸಿನಿಮಾ ಯಾವಾಗ ಎಂದು ಕೇಳಿದಾಗೆಲ್ಲ ಹಾರಿಕೆಯ ಉತ್ತರಗಳನ್ನೇ ಅವರು ನೀಡುತ್ತಾ ಬಂದರು. ಈ ಮಧ್ಯ ನರ್ತನ್ ನಿರ್ದೇಶನದಲ್ಲಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ನರ್ತನ್ ಅವರು ಯಶ್ ಸಿನಿಮಾಗಾಗಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಲೇ ಬಂದಿದ್ದರು. ಆದರೆ, ಆ ಪ್ರಾಜೆಕ್ಟ್ ಅನ್ನು ಅರ್ಧಕ್ಕೆ ಕೈ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನರ್ತನ್ ಬದಲಾಗಿ ತಮಿಳು ನಿರ್ದೇಶಕರಿಗೆ ಯಶ್ ಕಾಲ್ ಶೀಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ, ಈ ಕುರಿತು ಯಶ್ ಯಾವುದೇ ಸ್ಪಷ್ಟನೆಯನ್ನು ಈವರೆಗೂ ನೀಡದೇ ಇರುವುದು ಕುತೂಹಲಕ್ಕೂ ಕಾರಣವಾಗಿದೆ.
ಯಶ್ ಅವರ ಈ ಬಾರಿಯ ಹುಟ್ಟು ಹಬ್ಬ ಹಲವು ವಿಶೇಷಗಳಿಂದ ಕೂಡಿರುತ್ತದೆ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಯಶ್ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಲಿದ್ದಾರಂತೆ. ಆ ಬ್ಯಾನರ್ ಮೂಲಕವೇ ಪತ್ನಿ ರಾಧಿಕಾ ಪಂಡಿತ್ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಸ್ಥೆಯು ಯಶ್ ಅವರ ಮಗಳ ಹೆಸರಿನಲ್ಲಿ ಇರಲಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.
ಹುಟ್ಟು ಹಬ್ಬದ ದಿನದಂದು ಯಶ್ ಮತ್ತು ರಾಧಿಕಾ ಪಂಡಿತ್ ಅವರ ವೃತ್ತಿ ಬದುಕಿನ ಹಲವು ಮಹತ್ವದ ಹೆಜ್ಜೆಗಳು ಬಹಿರಂಗಗೊಳ್ಳಲಿದ್ದು, ಅಭಿಮಾನಿಗಳು ಅವುಗಳನ್ನು ತಿಳಿದುಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಇನ್ನೂ ಮೂರು ದಿನಗಳು ಕಳೆದರೆ, ಯಶ್ ಅವರ ಈ ಎಲ್ಲ ಮಹತ್ವದ ನಿರ್ಧಾರಗಳನ್ನು ಅಭಿಮಾನಿಗಳು ಕೇಳಿ ಸಂಭ್ರಮಿಸಬಹುದು. ಈ ಬಾರಿ ಯಾವುದೇ ಕಾರಣಕ್ಕೂ ಅಭಿಮಾನಿಗಳನ್ನು ಯಶ್ ನಿರಾಸೆ ಮಾಡುವುದಿಲ್ಲ ಎನ್ನುವುದು ಅವರದ್ದೇ ಬಳಗದಿಂದ ಬಂದಿರುವ ಸುದ್ದಿ.