ಪಡಿತರದಾರರಿಗೆ 10ರ ಬದಲು 6 ಕೆಜಿ ಫ್ರೀ ಅಕ್ಕಿ..!
ಬೆಂಗಳೂರು(ಜ.04): ರಾಜ್ಯದ ಪಡಿತರ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಹಂಚಿಕೆಯಾಗುತ್ತಿದ್ದ 10 ಕೆ.ಜಿ. ಅಕ್ಕಿಯ ಬದಲಿಗೆ ಇನ್ನು ಮುಂದೆ ಕೇವಲ 6 ಕೆಜಿ ಅಕ್ಕಿ ಮಾತ್ರ ಸಿಗಲಿದೆ!. ಕೋವಿಡ್ ಹಿನ್ನೆಲೆಯಲ್ಲಿ 2020-21ರ ಮೇ ತಿಂಗಳಿನಿಂದ 2022ರ ಡಿಸೆಂಬರ್ 31ರವರೆಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಸಾರ್ವಜನಿಕ ವಿತರಣ ಪದ್ಧತಿಯಲ್ಲಿ ರಾಜ್ಯದ ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆ.ಜಿ. ಅಕ್ಕಿಯನ್ನು ವಿತರಿಸುತ್ತಿತ್ತು. ಇದರೊಂದಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ರಾಜ್ಯ ಸರ್ಕಾರವೂ ಪ್ರತಿ ಫಲಾನುಭವಿಗೆ ತಲಾ 5 ಕೆ.ಜಿ. ಅಕ್ಕಿ ಹಂಚಿಕೆ ಮಾಡುತ್ತಿತ್ತು.
ಈವರೆಗೆ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ. ಅಕ್ಕಿ ಉಚಿತವಾಗಿ ಸಿಗುತ್ತಿತ್ತು. ಇದೀಗ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ವಿತರಿಸುತ್ತಿದ್ದ ತಲಾ 5 ಕೆ.ಜಿ. ಅಕ್ಕಿಯನ್ನು 2022 ಡಿಸೆಂಬರ್ 31ಕ್ಕೆ ಅಂತ್ಯಗೊಳಿಸಿದೆ. ಜೊತೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ರಾಜ್ಯ ಸರ್ಕಾರದ ಮೂಲಕ ವಿತರಿಸುತ್ತಿದ್ದ ಅಕ್ಕಿಯನ್ನು ಸ್ಥಗಿತಗೊಳಿಸಿದ್ದು, ನೇರವಾಗಿ ತಾನೇ ಉಚಿತವಾಗಿ ಫಲಾನುಭವಿಗಳಿಗೆ ತಲಾ 5 ಕೆ.ಜಿ. ಅಕ್ಕಿಯಂತೆ ವಿತರಿಸುವುದಾಗಿ ಘೋಷಿಸಿದೆ.
ಈ ಹಿಂದೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪ್ರತಿ ತಿಂಗಳು 2.17 ಲಕ್ಷ ಮೆಟ್ರಿಕ್ ಟನ್(ಪ್ರತಿ ಯೂನಿಟ್ಗೆ 5 ಕೆ.ಜಿ.) ಆಹಾರ ಧಾನ್ಯ ಹಂಚಿಕೆಯಾಗುತ್ತಿತ್ತು. ಅದಕ್ಕಾಗಿ ರಾಜ್ಯ ಸರ್ಕಾರ ಪ್ರತಿ ಕೆ.ಜಿ. ಅಕ್ಕಿಗೆ ತಲಾ 3 ರು. ಹಾಗೂ ಗೋಧಿಗೆ 2 ರು.ನಂತೆ ಹಣ ಪಾವತಿಸಿ ಪಡಿತರ ಆಹಾರ ಧಾನ್ಯವನ್ನು ಖರೀದಿಸಬೇಕಿತ್ತು. ಆದರೆ, ಈಗ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಕೇಂದ್ರ ಸರ್ಕಾರವೇ ಉಚಿತವಾಗಿ ಪ್ರತಿ ಫಲಾನುಭವಿಗೆ ತಲಾ 5 ಕೆ.ಜಿ.ಯಂತೆ ಅಕ್ಕಿಯನ್ನು ಉಚಿತವಾಗಿ ವಿತರಿಸಲಿದೆ.
ಹೆಚ್ಚುವರಿ 1 ಕೆ.ಜಿ. ಅಕ್ಕಿ ವಿತರಣೆ:
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರದ ಪಾಲಿನ ಜೊತೆಗೆ ಹೆಚ್ಚುವರಿಯಾಗಿ ಕೇವಲ ಒಂದು ಕೆ.ಜಿ. ಅಕ್ಕಿಯನ್ನು ಮಾತ್ರ ವಿತರಿಸಲು ಆದೇಶ ಹೊರಡಿಸಿದೆ. ಹೊಸ ಆದೇಶ ಜನವರಿ ಅಥವಾ ಫೆಬ್ರವರಿಯಿಂದ ಜಾರಿಗೆ ಬರಲಿದೆ. ರಾಜ್ಯದಲ್ಲಿ ಪ್ರಸ್ತುತ 10,91,508 ಅಂತ್ಯೋದಯ ಕಾರ್ಡುಗಳಿದ್ದು 44,83,745 ಮಂದಿ ಫಲಾನುಭವಿಗಳಿದ್ದಾರೆ. ಹಾಗೆಯೇ 1,15,93,227 ಬಿಪಿಎಲ್ ಕಾರ್ಡುಗಳಿದ್ದು 3,87,79,975 ಮಂದಿ ಫಲಾನುಭವಿಗಳಿದ್ದಾರೆ. ಹೀಗೆ ಒಟ್ಟು 4,32,63,720 ಮಂದಿ ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಪ್ರತಿ ತಿಂಗಳು ತಲಾ 6 ಕೆ.ಜಿ. ಅಕ್ಕಿಯನ್ನು ಪಡೆಯಲಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ತಿಂಗಳು ಪ್ರತಿ ಯೂನಿಟ್ಗೆ ತಲಾ 5 ಕೆ.ಜಿ.ಯಂತೆ ಒಟ್ಟು 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹಂಚಿಕೆ ಮಾಡಲಿದೆ. ಇದರೊಂದಿಗೆ ರಾಜ್ಯ ಸರ್ಕಾರ ತಲಾ 1 ಕೆ.ಜಿ.ಯಂತೆ 4.32 ಕೋಟಿಗೂ ಅಧಿಕ ಕೆ.ಜಿ. ಅಕ್ಕಿಯನ್ನು ವಿತರಿಸಲಿದೆ.
200 ಕೋಟಿ ರು.ಉಳಿತಾಯ?:
ಕೇಂದ್ರ ಸರ್ಕಾರವೇ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ರಾಜ್ಯದ 4.32 ಕೋಟಿಗೂ ಅಧಿಕ ಜನರಿಗೆ ಪ್ರತಿ ಯೂನಿಟ್ಗೆ ತಲಾ 5 ಕೆ.ಜಿ.ಯಂತೆ ಅಕ್ಕಿಯನ್ನು ಉಚಿತವಾಗಿ ಹಂಚಿಕೆ ಮಾಡಲಿದೆ. ಹೀಗಾಗಿ ರಾಜ್ಯಕ್ಕೆ ಪ್ರತಿ ತಿಂಗಳು ಸುಮಾರು 12.90 ಕೋಟಿ ರು.ನಂತೆ ವರ್ಷಕ್ಕೆ 150ರಿಂದ 200 ಕೋಟಿ ರು. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.