96 ರೂ. ಬೆಲೆಯ ಶಾಂಪೂಗೆ 199 ರೂ. ಚಾರ್ಜ್ ;ಫ್ಲಿಪ್‌ಕಾರ್ಟ್ ಕಂಪನಿಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ!
ಬೆಂಗಳೂರು: ಎಂಆರ್ಪಿಗಿಂತ ಹೆಚ್ಚು ಬೆಲೆಗೆ ಶಾಂಪೂ ಮಾರಾಟ ಮಾಡಿದ ಫ್ಲಿಪ್‌ಕಾರ್ಟ್ ಕಂಪನಿಗೆ ಗ್ರಾಹಕ ನ್ಯಾಯಾಲಯ ಶಾಕ್ ನೀಡಿದ್ದು, ಸಂತ್ರಸ್ತ ಮಹಿಳೆಗೆ ಪರಿಹಾರವಾಗಿ 20000 ರೂಪಾಯಿ ನೀಡುವಂತೆ ಖಡಕ್ ಸೂಚನೆ ನೀಡಿದೆ.
96 ರೂ. ಬೆಲೆಯ ಶಾಂಪೂಗೆ 199 ರೂ. ಚಾರ್ಜ್ ಮಾಡಿದ್ದಕ್ಕೆ ಬೆಂಗಳೂರಿನ ಗುಟ್ಟಹಳ್ಳಿ ಮೂಲದ ಸೌಮ್ಯ ಫ್ಲಿಪ್‌ಕಾರ್ಟ್ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು. ಈ ಸಂಬಂಧ ತೀರ್ಪು ನೀಡಿರುವ ನ್ಯಾಯಾಲಯ, 20 ಸಾವಿರ ರೂ. ಪರಿಹಾರದೊಂದಿಗೆ ಹೆಚ್ಚುವರಿ 96 ರೂ. ಅನ್ನು ಹಿಂದಿರುಗಿಸಬೇಕೆಂದು ಆದೇಶಿಸಿದೆ.
2019ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯ ಈಗ ತೀರ್ಪು ನೀಡಿದೆ. ಬಿಗ್ ಬಿಲಿಯನ್ಸ್ ಡೇಸ್ ಸೇಲ್ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್ ಆಫರ್ಗಳ ಲೀಸ್ಟ್ನಲ್ಲಿ ಶಾಂಪೂವನ್ನು ಇರಿಸಿತ್ತು. ಅಕ್ಟೋಬರ್ 3ರಂದು ಮಹಿಳೆ ಫೋನ್ ಪೇ ಮೂಲಕ ಶಾಂಪೂಗೆ 190 ರೂ. ಪಾವತಿಸಿದರು. ಶಾಂಪೂ ಪಡೆದ ನಂತರ ಶಾಂಪೂ ಮೂಲ ಬೆಲೆ ಅಂದರೆ, ಎಂಆರ್ಪಿ ಕಡಿಮೆ ಇರುವುದನ್ನು ಸೌಮ್ಯ ಅರಿತುಕೊಂಡರು. ಅಲ್ಲದೆ, ತನ್ನ ಸಂದೇಹವನ್ನು ನಿವಾರಿಸಿಕೊಳ್ಳಲು ಸೌಮ್ಯಾ ಮತ್ತೊಮ್ಮೆ ಫ್ಲಿಪ್‌ಕಾರ್ಟ್ ಆ್ಯಪ್ ಅನ್ನು ಪರಿಶೀಲಿಸಿದರು. ಈ ವೇಳೆ ಶಾಂಪೂ ಬೆಲೆ 140 ರೂ. ಮತ್ತು ಶಿಪ್ಪಿಂಗ್ ಶುಲ್ಕ 99 ರೂ. ಇರುವುದನ್ನು ನೋಡಿದ್ದಾರೆ.
ಇದರ ಬೆನ್ನಲ್ಲೇ ಮಹಿಳೆ ಫ್ಲಿಪ್‌ಕಾರ್ಟ್ ಕಸ್ಟಮರ್ ಕೇರ್ ಸಂಪರ್ಕಿಸಿದ್ದಾರೆ. ಮರುಪಾವತಿಗಾಗಿ ಶಾಂಪೂವನ್ನು ಹಿಂತಿರುಗಿಸಬಹುದು ಎನ್ನುವ ಮೂಲಕ ಕಸ್ಟಮರ್ ಕೇರ್ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಫ್ಲಿಪ್‌ಕಾರ್ಟ್ ಮಾರಾಟಗಾರರಾದ ಸೂರತ್‌ನ HBK ಎಂಟರ್‌ಪ್ರೈಸ್ ವಿರುದ್ಧ ಫ್ಲಿಪ್‌ಕಾರ್ಟ್ ಯಾವುದೇ ಕ್ರಮ ಕೈಗೊಂಡಿಲ್ಲ. ಇದಾದ ಬಳಿಕ ಸೌಮ್ಯ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ ಮತ್ತು ಫ್ಲಿಪ್‌ಕಾರ್ಟ್ ನ್ಯಾಯಾಲಯ ದಂಡದ ಬರೆ ಎಳೆದಿದೆ.
ಮತ್ತೆ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ
ಬೆಂಗಳೂರು: ಮತ್ತೆ ನಂದಿನಿ ಹಾಲಿನ ದರ (Nandini Milk Rate) ಏರಿಕೆಯಾಗುವ ಸಾಧ್ಯತೆಯಿದೆ. ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ.
ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.
ಬೆಲೆ ಏರಿಕೆ ಯಾಕೆ?
ಆರ್ಥಿಕ ನಷ್ಟದ (Economic Loss) ಹಿನ್ನೆಲೆ ಈ ಹಿಂದೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್ ಮನವಿ ಮಾಡಿತ್ತು. ಆದರೆ ಸರ್ಕಾರ ಅಕ್ಟೋಬರ್‌ನಲ್ಲಿ ಕೇವಲ 3 ರೂಪಾಯಿ ಮಾತ್ರ ಏರಿಕೆ ಮಾಡಿತ್ತು. ಈಗ 14 ಹಾಲು ಒಕ್ಕೂಟ ಗಳಿಂದ ಮನವಿ ಬಂದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ತಯಾರಿ ನಡೆಸುತ್ತಿದೆ.
ಕಳೆದ ಬಾರಿ 3 ರೂ. ನೇರವಾಗಿ ರೈತರಿಗೆ ನೀಡಿದ ಹಿನ್ನೆಲೆ ಒಕ್ಕೂಟಗಳಿಗೆ ನಷ್ಟದ ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎನ್ನುತ್ತಿದ್ದಾರೆ ಕೆಎಂಎಫ್ ಅಧಿಕಾರಿಗಳು. ಸದ್ಯ ಜನವರಿಯಲ್ಲಿ ಒಕ್ಕೂಟಗಳ ಸಭೆ ಕರೆದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ಚಿಂತನೆ ನಡೆಸಿದೆ.