900 ಕಿಮೀ ದೂರದಲ್ಲಿದ್ದರೂ ಸಾವಿನಲ್ಲೂ ಒಂದಾದ ಅವಳಿ ಮಕ್ಕಳು: ಒಂದೇ ಚಿತೆಯಲ್ಲಿ ಅಗ್ನಿಸ್ಪರ್ಶ
ಜೈಸಲ್ಮೇರ್: ಅವಳಿ-ಜವಳಿ ಮಕ್ಕಳು ಒಟ್ಟಿಗೆ ಜನಿಸುವುದು, ರೂಪದಲ್ಲಿ ಥೇಟ್ ಒಂದೇ ರೀತಿ ಇರುವುದು ಹೊಸತೇನಲ್ಲ. ಆದರೆ, ರಾಜಸ್ಥಾನ ಮೂಲದ ಅವಳಿ ಸಹೋದರರು ಸಾವಿನಲ್ಲೂ ‘ಸಾಮ್ಯತೆ’ ಮೆರೆದಿದ್ದಾರೆ!
ಹೌದು, ಪರಸ್ಪರ 900 ಕಿ.ಮೀ. ಅಂತರದಲ್ಲಿದ್ದರೂ ಇಬ್ಬರೂ ಸಹೋದರರು ಕಾಕತಾಳೀಯವೆಂಬಂತೆ ಒಂದೇ ರೀತಿಯ ಅವಘಡದಲ್ಲಿ, ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟಿದ್ದಾರೆ. ಒಬ್ಬರು ಜೈಪುರದಲ್ಲಿ ಕಾಲು ಜಾರಿ ನೀರಿನ ಟ್ಯಾಂಕ್‌ಗೆ ಬಿದ್ದು ಮೃತಪಟ್ಟರೆ, 900 ಕಿ.ಮೀ. ದೂರದ ಪುಣೆಯಲ್ಲಿ ಮತ್ತೊಬ್ಬ ಸಹೋದರ ಕಾಲು ಜಾರಿ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಸುಮೇರ್ ಸಿಂಗ್ ಮತ್ತು ಸೋಹನ್ ಸಿಂಗ್ ಎಂಬ ಇಬ್ಬರು ಸಹೋದರರನ್ನು ರಾಜಸ್ಥಾನದ ತಮ್ಮ ತವರೂರು ಸಾರ್ನೊ ಕಾ ತಾಲಾ ಗ್ರಾಮದಲ್ಲಿ ಕೊನೆಗೆ ಒಂದೇ ಚಿತೆಯ ಮೇಲೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಈ ವಿಚಿತ್ರ ಹಾಗೂ ಮನಕಲಕುವ ಘಟನೆ ಜನರನ್ನು ಭಾವುಕರನ್ನಾಗಿ ಮಾಡಿದೆ.
ಎರಡೂವರೆ ದಶಕಗಳ ಹಿಂದೆ ಅವಳಿ ಸಹೋದರರು ತಮ್ಮ ಜನ್ಮದ ಮೂಲಕ ಮನೆಯಲ್ಲಿ ‘ಡಬಲ್’ ಸಂತಸ ಮೂಡಿಸಿದ್ದರು, ಈಗ ಸಾವಿನಲ್ಲೂ ದುಪ್ಪಟ್ಟು ದುಃಖವನ್ನು ಹಂಚಿದ್ದಾರೆ.
ಮೃತ ಸಹೋದರರ ಪೈಕಿ ಸುಮೇರ್ ಪುಣೆಯಲ್ಲಿ ಕೆಲಸ ಮಾಡುತ್ತಿದ್ದರೆ, ರಾಜಸ್ಥಾನದಲ್ಲೇ ಉಳಿದಿದ್ದ ಮತ್ತು ಟ್ಯಾಂಕ್‌ಗೆ ಬಿದ್ದ ಸೋಹನ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು.
ದುರಂತ ನಡೆದದ್ದು ಹೇಗೆ?
”ಸುಮೇರ್ ಟೆರೇಸ್ ಮೇಲೆ ಫೋನಿನಲ್ಲಿ ಮಾತನಾಡುತ್ತಾ ಅಂಚಿಗೆ ತಲುಪಿದ್ದಾರೆ. ಈ ವೇಳೆ ಕಾಲು ಜಾರಿ, ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ತವರೂರಿನಲ್ಲಿದ್ದ ಮತ್ತೊಬ್ಬ ಸಹೋದರ, ಸೋಹನ್ ಸಾವಿನ ಸುದ್ದಿ ತಿಳಿದ ಕೆಲವೇ ಗಂಟೆಗಳಲ್ಲಿ ಕಾಲು ಜಾರಿ ನೀರಿನ ಟ್ಯಾಂಕ್‌ಗೆ ಬಿದ್ದಿದ್ದಾರೆ.
ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಟ್ಯಾಂಕ್‌ನಲ್ಲಿ ನೀರು ತರಲು ಹೋದ ಸೋಹನ್ ಮತ್ತೆ ಮನೆಗೆ ಬಂದಿಲ್ಲ. ಕುಟುಂಬದ ಸದಸ್ಯರು ಹುಡುಕಿದಾಗ,ಆತ ಟ್ಯಾಂಕ್‌ನಲ್ಲಿ ಬಿದ್ದಿರುವುದು ತಿಳಿದುಬಂದಿದೆ. ಅರೆ ಜೀವವಾಗಿದ್ದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಹೀಗೆ ಇಬ್ಬರೂ ಸಹೋದರರು ಬಹುತೇಕ ಒಂದೇ ರೀತಿಯಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಕೊನೆಯುಸಿರೆಳೆದಿದ್ದಾರೆ.
“ಎರಡನೇ ಸಹೋದರನ ಸಾವಿನ ಪ್ರಕರಣದಲ್ಲಿ ಆತ್ಮಹತ್ಯೆಯ ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ,’’ ಎಂದು ಬರ್ಮರ್ ಜಿಲ್ಲೆಯ ಸಿಂಧಾರಿ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಸುರೇಂದ್ರ ಸಿಂಗ್ ಹೇಳಿದ್ದಾರೆ.
ರಾಮ- ಲಕ್ಷ್ಮಣರ ಬಾಂಧವ್ಯ
ಮೃತ ಅವಳಿ ಸಹೋದರರಲ್ಲಿ ಕೇವಲ ರೂಪದಲ್ಲಿ ಮಾತ್ರದಲ್ಲ, ಅವರ ಹಾವಭಾವ-ನಡವಳಿಕೆ ಎಲ್ಲದರಲ್ಲೂ ಸಾಮ್ಯತೆಯಿತ್ತು ಎನ್ನುತ್ತಾರೆ ಗ್ರಾಮಸ್ಥರು. ಇಬ್ಬರೂ ಚಿಕ್ಕಂದಿನಿಂದಲೂ ತುಂಬಾ ಅನ್ಯೋನ್ಯವಾಗಿದ್ದರು. ಅವಳಿ ಮಕ್ಕಳ ಪೈಕಿ ಸೋಹನ್ ಕೊಂಚ ದೊಡ್ಡವರು. ಓದಿನಲ್ಲಿ ಕೂಡ ಚುರುಕು. ಹಾಗಾಗಿ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ, ಓದಿನಲ್ಲಿ ಅಷ್ಟು ಚುರುಕಿಲ್ಲದ ಸುಮೇರ್ ಪುಣೆಯಲ್ಲಿ ಕೆಲಸ ಮಾಡುತ್ತಿದ್ದರು. ಸಹೋದರನ ಓದಿಗೆ ಬೆಂಬಲಿಸುತ್ತಿದ್ದರು,” ಎಂದು ಗ್ರಾಮಸ್ಥ ರಾಮ್ ಸಿಂಗ್ ಹೇಳಿದ್ದಾರೆ.