ಗೋಬಿಗೆ ಬಣ್ಣ ನಿಷೇಧದ ಬಳಿಕ ಶೇಕಡಾ 80 ರಷ್ಟು ವ್ಯಾಪಾರ ಕುಸಿತ.!
ರಾಜ್ಯದಲ್ಲಿ ಕೃತಕ ಬಣ್ಣ ಬಳಿಸಿ ಮಾಡುವ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಯನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ. ತಿನ್ನುವ ಈ ಆಹಾರ ಪದಾರ್ಥಗಳಲ್ಲಿ ಬಳಸುವ ಬಣ್ಣದಲ್ಲಿ ರೊಡಮೈನ್-ಬಿ ಎನ್ನುವ ರಾಸಾಯನಿಕವನ್ನು ಬಳಸಲಾಗುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.
ಸದ್ಯ ಗೋಬಿ ಮಂಚೂರಿಗೆ ಹಾಕುವ ರಾಸಾಯನಿಕವನ್ನು ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಖಡಕ್ ಎಚ್ಚರಿಕೆ ನೀಡಿದ್ದು, ಗೋಬಿ ಮಂಚೂರಿಗೆ ಕೆಮಿಕಲ್‌ಯಕ್ತ ಬಣ್ಣ ಬಳಸಿದರೆ 10 ಸಾವಿರ ರೂಪಾಯಿ ದಂಡ ಬೀಳಲಿದೆ ಎಂದು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಗೋಬಿ ಮಂಚೂರಿ ವ್ಯಾಪರಿಗಳು ರಾಸಾಯನಿಕ ಬಳಸದೇ ಗೋಬಿ ತಯಾರಿಸುತ್ತಿದ್ದು, ರುಚಿ ಇಲ್ಲದೇ, ಗ್ರಾಹಕರೂ ಬಾರದೆ ಬೆಂಗಳೂರಿನಲ್ಲಿ ಗೋಬಿ ಮಂಚೂರಿ ವ್ಯಾಪಾರ ಶೇಕಡಾ 80 ರಷ್ಟು ಕುಸಿತಗೊಂಡಿದೆ.
ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿಯೂ ಗೋಬಿ ಮಂಚೂರಿ ಮಾರಾಟಗಾರರಿದ್ದು, ಸರ್ಕಾರದ ಈ ಕ್ರಮದಿಂದ ಬೀದಿ ಬದಿ ವ್ಯಾಪರಸ್ಥರಿಗೆ ಭಾರೀ ಹೊಡೆತ ಬಿದ್ದಿದೆ. ಬಣ್ಣವಿಲ್ಲದೇ ರುಚಿ ಇಲ್ಲದೇ ಗೋಬಿ ತಿನ್ನಲು ಗ್ರಾಹಕರು ಆಸಕ್ತಿ ಕಳೆದುಕೊಂಡಿದ್ದಾರೆ. ಗೋಬಿ ಮಂಚೂರಿ ತಿನ್ನಲು ಬರುತ್ತಿದ್ದ ಖಾಯಂ ಗ್ರಾಹಕರು ಸಹ ಬರುತ್ತಿಲ್ಲ. ಹೀಗಾಗಿ ಗೋಬಿ ಮಂಚೂರಿ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗೋಬಿ ಮಂಚೂರಿ ಮಾರಾಟದಿಂದ ಪ್ರತಿದಿನ 10 ಸಾವಿರ ರೂಪಾಯಿಯಷ್ಟು ಗಳಿಸುತ್ತಿದ್ದ ನಗರ ಬೀದಿ ಬದಿ ವ್ಯಾಪಾರಿಗಳು ಇದೀಗ ದಿನಕ್ಕೆ ಐದು ಸಾವಿರ ರೂಪಾಯಿ ಗಳಿಸುವುದು ಕಷ್ಟ ಸಾಧ್ಯವಾಗಿದೆ. ಇದರಿಂದ ಹಾಕಿದ ಬಂಡವಾಳವೂ ವಾಪಸ್ ಬಾರದೇ ಕಂಗಾಲಾಗಿದ್ದಾರೆ. ಹೀಗಾಗಿ ಮೊದಲೆಲ್ಲಾ ಗೋಬಿ ಮಾರಾಟ ಮಾಡುತ್ತಿದ್ದವರು ಸದ್ಯ ಪಾನಿಪೂರಿ, ಬೇಲ್‌ಪೂರಿ ವ್ಯಾಪಾರಕ್ಕೆ ಮುಂದಾಗಿದ್ದಾರೆ.
ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಗಳಲ್ಲಿ ಬಳಸುವ ರೊಡಮೈನ್-ಬಿ ರಾಸಾಯನಿಕವು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರ ಸೇವನೆಯಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳು ಬರುವ ಸಾಧ್ಯತೆ ಕೂಡ ಇದೆ. ರೊಡಮೈನ್ ಬಿ ರೇಷ್ಮೆ, ಸೆಣಬು, ಚರ್ಮ, ಹತ್ತಿ ಮತ್ತು ಉಣ್ಣೆಯನ್ನು ಬಣ್ಣ ಮಾಡಲು ಸಿಂಥೆಟಿಕ್ ಬಣ್ಣಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಇದನ್ನೇ ಆಹಾರಕ್ಕೆ ಬಣ್ಣ ನೀಡಲು ಕೂಡ ಬಳಸಲಾಗುತ್ತದೆ. ಪ್ಲಾಸ್ಟಿಕ್ ಉದ್ಯಮಗಳಲ್ಲಿ ಬಳಸುವ ಈ ರಾಸಾಯನಿಕವು ಮುಖ್ಯವಾಗಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಸದ್ಯ ರಾಜ್ಯ ಸರ್ಕಾರ ಕಾಟನ್ ಕ್ಯಾಂಡಿ ಹಾಗೂ ಕೃತಕ ಬಣ್ಣ ಬಳಸುವ ಗೋಬಿ ಮಂಜೂರಿಯನ್ನು ಬ್ಯಾನ್ ಮಾಡಲಾಗಿದೆ.