73 ಗಂಟೆಗಳಲ್ಲಿ ಜಗತ್ತು ಸುತ್ತಿದ ಭಾರತದ ಜೋಡಿ: ಗಿನ್ನೆಸ್ ದಾಖಲೆ
![pic 2](https://urtv24.com/wp-content/uploads/2023/01/pic-2-1024x768.jpg)
ಹೊಸದಿಲ್ಲಿ: ಭಾರತದ ಡಾ. ಅಲಿ ಇರಾನಿ ಹಾಗೂ ಸುಜೋಯ್ ಕುಮಾರ್ ಮಿತ್ರಾ ಜೋಡಿಯು ಕೇವಲ 73 ಗಂಟೆಗಳಲ್ಲಿ (3 ದಿನ 1 ಗಂಟೆ 5 ನಿಮಿಷ ಮತ್ತು 4 ಸೆಕೆಂಡ್‌ನಲ್ಲಿ) ಜಗತ್ತಿನ ಏಳೂ ಖಂಡಗಳನ್ನು ಸುತ್ತುವ ಮೂಲಕ ಹೊಸ ಗಿನ್ನೆಸ್ ದಾಖಲೆ ಸೃಷ್ಟಿಸಿದೆ.
ಡಿಸೆಂಬರ್ 4ರಂದು ಅಂಟಾರ್ಟಿಕಾದಲ್ಲಿ ವಿಮಾನದ ಮೂಲಕ ತಮ್ಮ ಸಾಹಸಯಾನ ಆರಂಭಿಸಿದ್ದ ಈ ಜೋಡಿ, ಡಿಸೆಂಬರ್ 7ರಂದು ಆಸ್ಪ್ರೇಲಿಯಾ ಮೆಲ್ಬೊರ್ನ್‌ನಲ್ಲಿ ಅಂತ್ಯಗೊಳಿಸಿದೆ. ಈ ಅವಧಿಯಲ್ಲಿ ಇಬ್ಬರೂ ಏಷ್ಯಾ, ಆಫ್ರಿಕಾ, ಯುರೋಪ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಂಟಾರ್ಟಿಕಾ ಮತ್ತು ಏಷ್ಯಾ ಖಂಡಗಳನ್ನು ಸುತ್ತಿದ್ದಾರೆ.
ಈ ಮುನ್ನ ಅತ್ಯಂತ ಕಡಿಮೆ ಅವಧಿಯಲ್ಲಿ ವಿಶ್ವ ಪ್ರವಾಸ ಮಾಡಿದ ದಾಖಲೆ ದುಬೈನ ಡಾಕ್ಟರ್ ಖಾಲ್ವಾ ಅಲ್ ರೊಮ್ಹೆತಿ ಹೆಸರಲ್ಲಿತ್ತು. ಅವರು 3 ದಿನ, 14 ಗಂಟೆ, 46 ನಿಮಿಷ, 48 ಸೆಕೆಂಡ್‌ಗಳಲ್ಲಿ ಸಾಹಸಯಾನ ಮುಗಿಸಿದ್ದರು.
ಕೆಟ್ ಫಿಸಿಯೋ ಅಲಿ
ಡಾ. ಅಲಿ ಇರಾನಿ (64) ಅವರು ಈ ಹಿಂದೆ ಭಾರತೀಯ ಕ್ರಿಕೆಟ್ ತಂಡದ ಫಿಸಿಯೋ ಆಗಿದ್ದರು. ಇದುವರೆಗೂ 90 ದೇಶಗಳನ್ನು ಸುತ್ತಿದ ಅನುಭವ ಹೊಂದಿದ್ದಾರೆ.
ಸುಜೋಯ್ ಕುಮಾರ್ ಮಿತ್ರಾ ಕಾರ್ಪೊರೇಟ್ ಹುದ್ದೆ ಬಿಟ್ಟು, ದೇಶ ಸುತ್ತುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಇದುವರೆಗೂ 172 ದೇಶ ಸುತ್ತಿದ್ದಾರೆ. ಶೀಘ್ರವೇ ಇನ್ನು 16 ದೇಶಗಳಿಗೆ ಭೇಟಿ ನೀಡುವ ಮೂಲಕ ಎಲ್ಲಾ 198 ದೇಶಗಳಿಗೂ ಭೇಟಿ ನೀಡಿದ ದಾಖಲೆ ಸೃಷ್ಟಿಸುವ ಆಶಯ ಹೊಂದಿದ್ದಾರೆ.
ತಮ್ಮ ಸಾಹಸಯಾನದ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಅಲಿ ಇರಾನಿ ಹಾಗೂ ಸುಜೋಯ್ ಕುಮಾರ್ ಮಿತ್ರಾ, ”ಇಂದು ನಾವು ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿರಬಹುದು, ಆದರೆ ನಾಳೆ ಬೇರೆಯವರು ನಮ್ಮ ದಾಖಲೆಯನ್ನು ಮುರಿಯುತ್ತಾರೆ,” ಎಂದು ಹೇಳಿದ್ದಾರೆ. ಇದೇ ವೇಳೆ, ಡಾ. ಅಲಿ ಇರಾನಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಸಹ ಹಂಚಿಕೊಂಡಿದ್ದಾರೆ.
“ಪ್ರವಾಸಗಳು ಗಡಿಗಳನ್ನು ಜೋಡಿಸುತ್ತವೆ ಮತ್ತು ಜಗತ್ತಿನಾದ್ಯಂತ ಜನರನ್ನು ಒಂದುಗೂಡಿಸುತ್ತವೆ. ನಾವಿಬ್ಬರೂ ತೀವ್ರ ಒಲವು ಹೊಂದಿರುವಂತಹ ಹವ್ಯಾಸದಲ್ಲಿಯೇ ವಿಶ್ವದಾಖಲೆ ಮುರಿಯುವುದು ಬಹಳ ತೃಪ್ತಿದಾಯಕ ಭಾವನೆ ನೀಡುತ್ತದೆ. ಈ ಸಾಧನೆಯಿಂದ ನಮಗೆ ಖುಷಿಯಾಗಿದೆ. ಇದು ಮತ್ತಷ್ಟು ಜನರು ಪ್ರಯಾಣದ ಬಗ್ಗೆ ಆಸಕ್ತಿ ಹೊಂದುವಂತೆ ಹಾಗೂ ನಮ್ಮ ಈ ಸುಂದರ ಜಗತ್ತನ್ನು ಅವಲೋಕಿಸಲು ಪ್ರೇರೇಪಿಸುವುದರಲ್ಲಿ ಕಾಣಿಕೆ ನೀಡುತ್ತದೆ ಎಂಬ ಆಶಯವಿದೆ” ಎಂದಿದ್ದಾರೆ ಇರಾನಿ.
“ಗಿನ್ನೆಸ್ ವಿಶ್ವದಾಖಲೆ ಮಾಡಿದವರೆಂಬ ಹೆಗ್ಗಳಿಕೆ ಪಡೆದಿರುವುದು ನಮಗೆ ಸಂದ ಗೌರವ. ಆದರೆ ದಾಖಲೆಗಳು ಇರುವುದೇ ಮುರಿಯಲು ಎನ್ನುವುದು ನಮ್ಮ ನಂಬಿಕೆ” ಎಂದು ಮಿತ್ರಾ ಹೇಳಿದ್ದಾರೆ.
“ಈ ಪ್ರಯಾಣ ಇಲ್ಲಿಗೆ ಅಂತ್ಯದೊಂಡಿರಬಹುದು, ಆದರೆ ನಮಗೆ ಸಾಧಿಸಲು ಇನ್ನೂ ಅನೇಕ ಮೈಲುಗಲ್ಲುಗಳಿವೆ. ಇಂದು ನಾವು ದಾಖಲೆಯೊಂದನ್ನು ಮುರಿಯುವುದರಲ್ಲಿ ಯಶಸ್ಸು ಕಂಡಿರಬಹುದು. ನಾಳೆ ಮತ್ತೊಬ್ಬರು ಯಾರೋ ನಮ್ಮ ದಾಖಲೆ ಮುರಿಯುತ್ತಾರೆ. ಹೀಗಾಗಿ ಕಷ್ಟಗಳನ್ನು ಆನಂದಿಸಿ. ಕಠಿಣ ಸವಾಲುಗಳನ್ನು ಸಂಭ್ರಮಿಸಿ. ವಿಫಲತೆಯೂ ಇಳ್ಳೆಯದಾಗಿರಲಿ ಎಂದು ಆಶಿಸಿ. ಆಗ ಮ್ಯಾಜಿಕ್ ನಡೆಯುತ್ತದೆ” ಎಂದಿದ್ದಾರೆ.