7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಪ್ರತಿಭಟನೆ – ನಾಳೆ ಸರ್ಕಾರಿ ಸೇವೆಯಲ್ಲಿ ವ್ಯತ್ಯಯ?
ಬೆಂಗಳೂರು: 7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನಾಳೆ ಸರ್ಕಾರಿ ನೌಕರರು (Government Employees) ಪ್ರತಿಭಟನೆಗೆ (Protest) ಕರೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳು ಹಾಗೂ ಶಾಲಾ, ಕಾಲೇಜುಗಳಿಗೂ (College) ಇದರ ಪರಿಣಾಮ ತಟ್ಟಲಿದೆ.
ಕಳೆದ ಕೆಲವು ತಿಂಗಳಿನಿಂದ ಏಳನೇ ವೇತನ ಆಯೋಗ ಜಾರಿ ಹಾಗೂ ಎನ್‍ಪಿಎಸ್ ರದ್ದು ಮಾಡುವಂತೆ ಆಗ್ರಹಿಸಿ ಸರ್ಕಾರಿ ನೌಕರರು ಹೋರಾಟ ನಡೆಸುತ್ತಿದ್ದಾರೆ. ಇದೀಗ ಈ ಪ್ರತಿಭಟನೆಯನ್ನು ತೀವ್ರವಾಗಿ ನಡೆಸಲು ನಾಳೆ ನಿರ್ಧರಿಸಿದ್ದಾರೆ. ಆದರೆ ಸರ್ಕಾರ ಮಧ್ಯಂತರ ಆದೇಶಗಳನ್ನು ಜಾರಿಗೊಳಿಸಿದರೇ ಮಾತ್ರ ಪ್ರತಿಭಟನೆ ವಾಪಸ್ ತೆಗೆದುಕೊಳ್ಳುವುದಾಗಿ ಈಗಾಗಲೇ ತಿಳಿಸಿದ್ದಾರೆ. ನಾಳೆಯೊಳಗೆ ಸರ್ಕಾರ ಆದೇಶ ಹೊರಡಿಸದೇ ಇದ್ದರೆ 6 ಲಕ್ಷ ಉದ್ಯೋಗಿಗಳು ಪ್ರತಿಭಟನೆ ಮಾಡುವ ಸಾಧ್ಯತೆಯಿದೆ.
ಈ ಪ್ರತಿಭಟನೆಗೆ ಸರ್ಕಾರಿ ಶಾಲಾ- ಕಾಲೇಜಿನ ಸರ್ಕಾರಿ ಉಪನ್ಯಾಸಕರು ಕೈಜೋಡಿಸಲಿದ್ದು, ಕೆಲಸಕ್ಕೆ ಗೈರಾಗಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ – ಕಾಲೇಜಿನಲ್ಲಿ ಪರೀಕ್ಷೆಗಳು (Exam) ಮುಂದೂಡಿಕೆ ಸಾಧ್ಯತೆಯಿದೆ. ಜೊತೆಗೆ ಸರ್ಕಾರಿ ಹಾಸ್ಟೆಲ್‍ನಲ್ಲಿಯೂ ಸಿಬ್ಬಂದಿ ಗೈರಾಗಲು ನಿರ್ಧಾರಿಸಿದ್ದಾರೆ. ಇದರ ಜೊತೆಗೆ ಆಸ್ತಿ ನೋಂದಣಿ, ವಾಹನ ನೋಂದಣಿ, ವಾಹನದ ಲೈಸೆನ್ಸ್ ವಿತರಣೆ ಎಲ್ಲವೂ ಬಂದ್ ಆಗಲಿದ್ದು, ಸಾರ್ವಜನಿಕರಿಗೆ ಸರ್ಕಾರಿ ಸೇವೆಯಲ್ಲಿ ವ್ಯತ್ಯಯ ಆಗಲಿದೆ. ಕಂದಾಯ ಇಲಾಖೆ ಸಬ್ ರಿಜಿಸ್ಟರ್ ಕಚೇರಿ, ಗ್ರಾಮ ಲೆಕ್ಕಿಗ ಕಚೇರಿ ಎಲ್ಲವೂ ಬಂದ್ ಆಗಲಿದ್ದು, ಆಸ್ಪತ್ರೆಗಳಿಗೂ (Hospital) ಪ್ರತಿಭಟನೆ ಬಿಸಿ ತಟ್ಟಲಿದೆ.
ಆಸ್ಪತ್ರೆ ಹೊರರೋಗಿ ವಿಭಾಗದಲ್ಲಿ ಕೆಲಸ ನಿರ್ವಹಿಸದೇ ಇರಲು ಸರ್ಕಾರಿ ಆರೋಗ್ಯ ನೌಕರರ ಸಂಘ ನಿರ್ಧರಿಸಿದ್ದಾರೆ. ಓಪಿಡಿ ಹೊರತುಪಡಿಸಿ ಉಳಿದಂತೆ, ಐಸಿಯು, ಎಮರ್ಜೆನ್ಸಿ ಸೇವೆಗಳು ಮಾತ್ರ ಲಭ್ಯವಾಗಲಿದೆ. ಅತಿ ತುರ್ತು ಸೇವೆಗಳು ಮಾತ್ರ ನಾಳೆಯಿಂದ ಲಭ್ಯವಾಗಿದೆ. ಸದ್ಯ ರಾಜ್ಯದಲ್ಲಿ 45 ಸಾವಿರಕ್ಕೂ ಹೆಚ್ಚು ಸರ್ಕಾರಿ ವೈದ್ಯಕೀಯ ಸಿಬ್ಬಂದಿಯಿದ್ದಾರೆ. ಏಕಕಾಲದಲ್ಲಿ ಓಪಿಡಿ ಬಂದ್ ಮಾಡಲು ನೌಕರರ ಸಂಘ ನಿರ್ಧರಿಸಿದ್ದಾರೆ.
ನಾಳೆ ಯಾವೆಲ್ಲ ಇಲಾಖೆಗಳು ಬಂದ್?: ವಿಧಾನಸೌಧದ ಎಲ್ಲಾ ಕಚೇರಿಗಳು, ಸಚಿವಾಲಯದ ಎಲ್ಲಾ ಕಚೇರಿಗಳು ಬಂದ್ ಆಗುವ ಸಾಧ್ಯತೆಯಿದೆ. ಬಿಬಿಎಂಪಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ, ಸರ್ಕಾರಿ ಹಾಸ್ಟೆಲ್‍ಗಳು, ತಾಲೂಕು ಕಚೇರಿ, ಜಿಲ್ಲಾ ಕಚೇರಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆಗಳಲ್ಲಿ ಸೇವೆಗಳಿರುವುದಿಲ್ಲ.