5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ಗೊಂದಲಕ್ಕೆ ತೆರೆ ; ಹೈಕೋರ್ಟ್ ಮಹತ್ವದ ತೀರ್ಪು.!
ರಾಜ್ಯದ ಪಠ್ಯಕ್ರಮ (Karnataka State Curriculum) ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆಗೆ ಕರ್ನಾಟಕ ಹೈಕೋರ್ಟ್ (Karnataka High Court) ಅನುಮತಿ ನೀಡಿದೆ. ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿ ಆದೇಶಿಸಿದೆ. ಅಲ್ಲದೆ, ಸ್ಥಗಿತಗೊಂಡಿರುವ ಪರೀಕ್ಷೆ ಮುಂದುವರಿಸಲು ಸೂಚನೆ ನೀಡಿದೆ. ಮುಂದಿನ ಶೈಕ್ಷಣಿಕ ವರ್ಷದ ಪರೀಕ್ಷೆಯ ವೇಳೆ ಸಂಬಂಧಪಟ್ಟವರೊಂದಿಗೆ ಸಮಾಲೋಚಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ
2023-24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 5, 8, 9ನೇ ಹಾಗೂ 11 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಅನುದಾನ ರಹಿತ ಶಾಲೆಗಳ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು.
5, 6, 8, 9ನೇ ತರಗತಿಯ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಖಾಸಗಿ ಶಾಲೆಗಳಷ್ಟೇ ಬೋರ್ಡ್ ಪರೀಕ್ಷೆಗೆ ತಕರಾರಿದೆ. ಸ್ವಹಿತಾಸಕ್ತಿಗಾಗಿ ಖಾಸಗಿ ಶಾಲೆಗಳು ರಿಟ್ ಸಲ್ಲಿಸಿವೆ. ಪೋಷಕರಾಗಲೀ, ಮಕ್ಕಳಾಗಲೀ ಬೋರ್ಡ್ ಪರೀಕ್ಷೆಗೆ ಆಕ್ಷೇಪಿಸಿಲ್ಲ. ಬೋರ್ಡ್ ಪರೀಕ್ಷೆಯಿಂದ ಖಾಸಗಿ ಶಾಲೆಗಳ ಮೌಲ್ಯಮಾಪನವಾಗಲಿದೆ. ತಡೆಯಾಜ್ಞೆಯಿಂದ ಸೋಮವಾರ ನಡೆಯುವ ಪರೀಕ್ಷೆ ಅಡಕತ್ತರಿಗೆ ಸಿಲುಕಿದೆ. ಹೀಗಾಗಿ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸರ್ಕಾರದ ಪರ ಎಎಜಿ ವಿಕ್ರಮ್ ಹುಯಿಲಗೋಳ್ ಅವರು ಮೇಲ್ಮನವಿಯಲ್ಲಿ ಮನವಿ ಮಾಡಿದ್ದರು.
ಮತ್ತೊಂದೆಡೆ ಸರ್ಕಾರದ ಈ ಮನವಿಗೆ ಖಾಸಗಿ ಶಾಲೆಗಳ ಸಂಘ ಆಕ್ಷೇಪ ವ್ಯಕ್ತಪಡಿಸಿತ್ತು. ಅಂತಿಮವಾಗಿ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಬೋರ್ಡ್ ಎಕ್ಸಾಂ ನಡೆಸಲು ಗ್ರೀನ್ ಸಿಗ್ನಲ್ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ರೂಪ್ಸ ಹಾಗೂ ಅವರ್ ಸ್ಕೂಲ್ಸ್ ಮೇಲ್ಮನವಿ ಸಲ್ಲಿಸಿತ್ತು. ಅದರಂತೆ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂ, ಪರೀಕ್ಷೆ ನಡೆಸದಂತೆ ತಡೆ ನೀಡಿತ್ತು. ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸುವಂತೆ ಹೈಕೋರ್ಟ್‌ಗೆ ಸುಪ್ರೀಂಕೋರ್ಟ್ ಸೂಚಿಸಿತ್ತು.
ಸೋಮವಾರದಿಂದಲೇ ಪರೀಕ್ಷೆ: ಸರ್ಕಾರ ಹೇಳಿಕೆ
5, 8 ಮತ್ತು 9ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸೋಮವಾರದಿಂದಲೇ ನಡೆಸುವ ಬಗ್ಗೆ ಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ಈಗಾಗಲೇ ಐದನೇ ತರಗತಿ ನಾಲ್ಕು ವಿಷಯಗಳ ಪರೀಕ್ಷೆ ಮುಗಿದಿವೆ. 8 ಹಾಗೂ 9 ತಗರತಿಗಳ ಎರಡೆರಡು ವಿಷಯಗಳ ಪರೀಕ್ಷೆ ನಡೆದಿವೆ. 11ನೇ ತರಗತಿ ಎಲ್ಲಾ ವಿಷಯಗಳ ಪರೀಕ್ಷೆ ಮುಕ್ತಾಯವಾಗಿದ್ದು ಫಲಿತಾಂಶ ಹೊರ ಬರಬೇಕಿದೆ.
ಮಾರ್ಚ್ 13ರಂದು ಸುಪ್ರೀಂಕೋರ್ಟ್ (Stay from Supreme Court) ಈ ಪರೀಕ್ಷೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್‌ನಲ್ಲಿ (Karnataka High Court) ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಸೂಚಿಸಿತ್ತು. ಅದರನುಸಾರವಾಗಿ ಈಗ ತೀರ್ಪು ಬಂದಿದೆ.
ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Education Department) ನಡೆಸುತ್ತಿರುವ ಈ ಪರೀಕ್ಷೆ ಮಾರ್ಚ್ 11ರಂದು ಆರಂಭಗೊಂಡು ಮಾರ್ಚ್ 18ಕ್ಕೆ ಮುಗಿಯಬೇಕಾಗಿತ್ತು. ಮಾರ್ಚ್ 12ರಂದು ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿ ಹೈಕೋರ್ಟ್‌ಗೆ ಹೋಗುವಂತೆ ಸೂಚಿಸಿದಾಗ ಸರ್ಕಾರ ತಕ್ಷಣವೇ ಹೈಕೋರ್ಟ್ ಬಾಗಿಲು ತಟ್ಟುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಈ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಯದ ಶಿಕ್ಷಣ ಇಲಾಖೆ ಮತ್ತು ಅಧಿಕಾರಿಗಳು ಒಂದೆರಡು ದಿನ ತಡವಾಗಿ ಹೈಕೋರ್ಟ್ ಮೊರೆ ಹೊಕ್ಕಿದ್ದರು.