ಅದೃಷ್ಟದ ಕಲ್ಲು ಎಂದು ನಂಬಿಸಿ ಸ್ನೇಹಿತನಿಂದಲೇ 52 ಲಕ್ಷ ಪಂಗನಾಮ...!
ಬೆಂಗಳೂರು : ಅದೃಷ್ಟದ ಪಚ್ಚೆ ಕಲ್ಲನ್ನು ಕಡಿಮೆ ಬೆಲೆಗೆ ಖರೀದಿಸಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಬಹುದು ಎಂದು ಆಮಿಷವೊಡ್ಡಿ ಸ್ನೇಹಿತ ಉದ್ಯಮಿಯೊಬ್ಬರಿಂದ ₹52 ಲಕ್ಷ ಪಡೆದು ಅವರ ಸ್ನೇಹಿತರೇ ವಂಚಿಸಿದ್ದಾರೆ.ನಗರದ ರಿಚ್ಮಂಡ್ ಟೌನ್ ನಿವಾಸಿ ಶೌಕತ್ ಆಲಿ ವಂಚನೆಗೆ ಒಳಗಾಗಿದ್ದು, ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆಲಿ ಸ್ನೇಹಿತರಾದ ಅಶ್ಪಾಕ್ ಬೇಗ್, ಶಾನವಾಜ್ ಮಿರ್ಜಾ ಹಾಗೂ ಸಾಜಿದ್ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಒಂದೂವರೆ ದಶಕಗಳಿಂದ ಆಲಿ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ಪರಸ್ಪರ ಹಣಕಾಸು ವ್ಯವಹಾರ ಸಹ ನಡೆದಿತ್ತು.
ಹೀಗಿರುವಾಗ ಕಳೆದ ಏಪ್ರಿಲ್‌ನಲ್ಲಿ ಆಲಿಗೆ ಕರೆ ಮಾಡಿದ ಸ್ನೇಹಿತರು, ನಮಗೆ ಪರಿಚಯವಿರುವ ವ್ಯಕ್ತಿ ಬಳಿ ಬೆಲೆ ಬಾಳುವ ಪಚ್ಚೆ ಕಲ್ಲು ಇದೆ. ಅದನ್ನು ಆತ ₹52 ಲಕ್ಷಕ್ಕೆ ಮಾರುತ್ತಿದ್ದಾನೆ. ನಾವೇ ಖರೀದಿಸಿದರೆ ಅದನ್ನು ₹1 ಕೋಟಿಗೆ ಮಾರಾಟ ಮಾಡಬಹುದು ಎಂದು ಹೇಳಿದ್ದರು. ಲಾಭದಾಸೆಗೆ ಆಲಿ ಸಹ ಡೀಲ್‌ಗೆ ಸಮ್ಮತಿ ಸೂಚಿಸಿದ್ದರು. ಆನಂತರ ಹಂತ ಹಂತವಾಗಿ ಆಲಿಯಿಂದ ₹52 ಲಕ್ಷವನ್ನು ವಸೂಲಿ ಮಾಡಿದ ಆರೋಪಿಗಳು, ಬಳಿಕ ಪಚ್ಚೆ ಕಲ್ಲು ಕೊಡಲು ಏನೇನೂ ಸಬೂಬು ಹೇಳುತ್ತಿದ್ದರು. ಕೊನೆಗೆ ಪಚ್ಚೆ ಕಲ್ಲು ತೆಗೆದುಕೊಂಡು ಆಲಿ ಮನೆಗೆ ಹೋಗಿದ್ದ ಆರೋಪಿಗಳು, ಈ ಕಲ್ಲನ್ನು ಖರೀದಿಸಲು ವೈಟ್‌ಫೀಲ್ಡ್‌ಗೆ ಸ್ವಾಮೀಜಿಯೊಬ್ಬರು ಬಂದಿದ್ದಾರೆ ಎಂದು ಹೇಳಿ ಆಲಿಯನ್ನು ಹೊರಗೆ ಕರೆ ತಂದಿದ್ದರು. ನಂತರ ‘ಚೀನಾದ ಉದ್ಯಮಿ ಖರೀದಿಸುತ್ತಾರೆ.
ಸದ್ಯ ರಾಜಸ್ಥಾನಕ್ಕೆ ವಿದೇಶಿ ಉದ್ಯಮಿ ಬಂದಿದ್ದು, ಅಲ್ಲಿ ಹೋಗಿ ಭೇಟಿ ಮಾಡಿ’ ಎಂದು ಸ್ವಾಮೀಜಿ ಹೇಳಿ ಕಳುಹಿಸಿದ್ದರು. ಇದನ್ನು ನಂಬಿದ ಉದ್ಯಮಿ, ಆರೋಪಿಗಳ ಜೊತೆಯಲ್ಲಿ ರಾಜಸ್ಥಾನಕ್ಕೆ ಪಚ್ಚೆ ಕಲ್ಲು ತೆಗೆದುಕೊಂಡು ಹೋಗಿದ್ದರು. ಅಲ್ಲಿ ಒಂದು ತಿಂಗಳು ಹೋಟೆಲ್‌ನಲ್ಲಿ ಉಳಿದುಕೊಂಡು ಕೊನೆಗೊಂದು ದಿನ ಪಚ್ಚೆ ಕಲ್ಲು ಮಾರಾಟ ಮಾಡಿ ಹಣವನ್ನು ತೆಗೆದುಕೊಂಡು ಬರುವುದಾಗಿ ಉದ್ಯಮಿಗೆ ಹೇಳಿ ಬೆಂಗಳೂರಿಗೆ ಕಳುಹಿಸಿದ್ದರು. ಬಳಿಕ ಆರೋಪಿಗಳು ಮೊಬೈಲ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಅಂತಿಮವಾಗಿ ತಾನು ಮೋಸ ಹೋಗಿರುವುದು ಅರಿವಾಗಿ ಆಲಿ ವಿಶ್ವಾಸ ದ್ರೋಹ ಮಾಡಿದ ಸ್ನೇಹಿತರ ವಿರುದ್ದ ಪೊಲೀಸ್ ಮೆಟ್ಟಲೇರಿದ್ದಾರೆ.
ನಮ್ಮ ಮೆಟ್ರೋದಲ್ಲಿ ಕಾಮುಕನ ಚೇಷ್ಟೆ – ಖಾಸಗಿ ಅಂಗ ಸ್ಪರ್ಶಿಸಿ ಯುವತಿಗೆ ಕಿರುಕುಳ
ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಯುವತಿಗೆ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು (Bengaluru) ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಜನವರಿ 1 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವಕನೋರ್ವ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. ಮೆಟ್ರೋದಿಂದ ಇಳಿಯುತ್ತಿದ್ದಂತೆ ಯುವತಿ (Bengaluru Woman), ಯುವಕನಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾಳೆ.
ಯುವಕನನ್ನು ಮೆಟ್ರೋ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾಳೆ. ಬಳಿಕ ನೀನು ಇಲ್ಲಿಂದ ಹೋಗೋಹಾಗಿಲ್ಲ, ನಿನಗೆ ಶಿಕ್ಷೆ ಆಗಲೇಬೇಕು, ಮಾತನಾಡದಿದ್ರೆ ನಮಗೆ ನ್ಯಾಯ ಸಿಗಲ್ಲ ಎಂದು ಪಟ್ಟು ಹಿಡಿದು ಕ್ರಮಕ್ಕೆ ಒತ್ತಾಯಿಸಿದ್ದಾಳೆ. ಬಳಿಕ ವಿಚಾರಣೆ ನಡೆಸಿ ಮೆಟ್ರೊ ಅಧಿಕಾರಿಗಳು ಯುವಕನನ್ನ ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಯುವಕ ತಪ್ಪೊಪ್ಪಿಕೊಂಡ ಬಳಿಕ ಇನ್ನೊಮ್ಮೆ ಹೀಗೆ ಮಾಡದಂತೆ ಕ್ಷಮೆ ಕೇಳಿಸಿ ಕಳುಹಿಸಿದ್ದಾರೆ.
ಘಟನೆ ನಡೆದ ಒಂದು ವಾರದ ಬಳಿಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯ ಎಸಗಿದ್ದ ಯುವಕ ಮೂಲತಃ ಉತ್ತರ ಭಾರತದ ನಿವಾಸಿ ಎಂದು ತಿಳಿದುಬಂದಿದೆ.