ಮೆಟ್ರೊದಲ್ಲಿ ಗೋಬಿ-ಮಂಚೂರಿ ತಿಂದವನಿಗೆ 500 ರೂ. ದಂಡ!
ಬೆಂಗಳೂರು: ಮೆಟ್ರೋದಲ್ಲಿ (Namma Metro) ಪ್ರಯಾಣಿಸುವ ವೇಳೆ ಗೋಬಿ ಮಂಚೂರಿಯನ್ನು ಸೇವಿಸಿದ ವ್ಯಕ್ತಿಗೆ ಅಧಿಕಾರಿಗಳು 500 ರೂ. ದಂಡ ವಿಧಿಸಿದ್ದಾರೆ.
ವ್ಯಕ್ತಿ ಮೆಟ್ರೋ ಪ್ರಯಾಣದ ವೇಳೆ ಗೋಬಿ ಸೇವಿಸುತ್ತಿರುವುದನ್ನು ಸ್ನೇಹಿತರು ವೀಡಿಯೋ ಮಾಡಿದ್ದರು. ಈ ವೀಡಿಯೋ ವೈರಲ್ ಆಗಿದೆ. ಬಳಿಕ ಈ ವಿಚಾರ ಬಿಎಂಆರ್‌ಸಿಎಲ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಮೆಟ್ರೋ ನಿಗಮ ವ್ಯಕ್ತಿಯಿಂದ ದಂಡ ವಸೂಲಿ ಮಾಡಿದೆ.
ನಿಯಮ ಉಲ್ಲಂಘಿಸಿದ ವ್ಯಕ್ತಿಯನ್ನು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಆತ ಜಯನಗರದ (Jayanagar) ಪ್ರತಿಷ್ಠಿತ ಆಭರಣ ಮಳಿಗೆ ಒಂದರ ಉದ್ಯೋಗಿಯಾಗಿದ್ದಾನೆ. ಆತ ಪ್ರತಿದಿನ ಸಂಪಿಗೆ ರೋಡ್ ಮೆಟ್ರೋ ನಿಲ್ದಾಣದಿಂದ ಪ್ರಯಾಣ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ವೀಡಿಯೋ ಗಮನಕ್ಕೆ ಬಂದ ಬಳಿಕ ಎಂದಿನಂತೆ ನಿಲ್ದಾಣಕ್ಕೆ ಬಂದಾಗ ಆತನನ್ನು ಅಧಿಕಾರಿಗಳು ತಡೆದಿದ್ದಾರೆ. ಬಳಿಕ ದಂಡ ವಿಧಿಸಿ ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದು, ಮುಂದೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಹಂಪಿಯಲ್ಲಿ ರೀಲ್ಸ್ ಹುಚ್ಚಾಟ – ಸ್ಮಾರಕಗಳಿಗೆ ರಕ್ಷಣೆ ಕೊಡಿ ಎಂದ ಗ್ರಾಮಸ್ಥರು
ಬಳ್ಳಾರಿ: ಪ್ರವಾಸಿಗರು (Tourist) ಸೇರಿದಂತೆ ಸ್ವತಃ ಹಂಪಿಯ (Hampi) ಗೈಡ್ ಬೇಕಾಬಿಟ್ಟಿ ಸ್ಮಾರಕಗಳ ಮೇಲೆ ರೀಲ್ಸ್ (Reels) ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಗೈಡ್ ಹಾಗೂ ಪ್ರವಾಸಿಗರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಹಂಪಿಯ ನಿವಾಸಿ, ಗೈಡ್ ಆಗಿರುವ ಹೇಮಂತ್ ಸ್ಮಾರಕಗಳ ಬಳಿ ರೀಲ್ಸ್ ಮಾಡಿದ್ದಾರೆ. ಹಂಪಿ ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ಸ್ಮಾರಕಗಳ ರಕ್ಷಣೆಗೆ ಪುರಾತತ್ವ ಇಲಾಖೆ ಕೋಟ್ಯಂತರ ರೂ. ಹಣ ಖರ್ಚು ಮಾಡುತ್ತದೆ. ಹಂಪಿಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದು ಸ್ಮಾರಕಗಳ ಮೇಲೆ ಹತ್ತಿ ಎಲ್ಲೆಂದರಲ್ಲಿ ಪ್ರವಾಸಿಗರು ಕುಣಿಯುತ್ತಿದ್ದಾರೆ.
ರೀಲ್ಸ್ ಮಾಡುವ ಪ್ರವಾಸಿಗರಿಗೆ ಹೇಳುವವರು ಕೇಳುವವರು ಇಲ್ಲದಾಗಿದೆ. ಹೆಜ್ಜೆ ಹೆಜ್ಜೆಗೂ ಸೆಕ್ಯುರಿಟಿ ನೇಮಕ ಮಾಡಿರುವ ಪುರಾತತ್ವ ಇಲಾಖೆ ಸುಮ್ಮನೆ ಕುಳಿತಿದೆ. ಐತಿಹಾಸಿಕ ಕಲ್ಲಿನ ರಥ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲದಲ್ಲಿ ಬೇಕಾಬಿಟ್ಟಿ ರೀಲ್ಸ್ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಸ್ಥಳೀಯರು ಆಗ್ರಹ ಮಾಡಿದ್ದಾರೆ.