5 ಗ್ಯಾರಂಟಿಗಳಿಗೆ ಕಾಂಗ್ರೆಸ್ ಸರಕಾರ ಹಣ ಎಲ್ಲಿಂದ ಹೊಂದಿಸಲಿದೆ ಎಂದು ಜನತೆಗೆ ತಿಳಿಸಲಿ - ಶೋಭಾ ಕರಂದ್ಲಾಜೆ
ಮೈಸೂರು: ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿರುವ ಕಾಂಗ್ರೆಸ್ ಸರಕಾರ ಹಣವನ್ನು ಎಲ್ಲಿಂದ ಹೊಂದಿಸಲಿದೆ ಎಂಬು ದನ್ನು ರಾಜ್ಯದ ಜನತೆಗೆ ತಿಳಿಸಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯುತ್ ದರ ಏರಿಕೆಯಾಗಿದ್ದು, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಈ ಐದು ಯೋಜನೆಗಳಿಗೆ ಹಣಕಾಸು ಸಚಿವರು, ಮುಖ್ಯಮಂತ್ರಿಗಳೂ ಆದ ಸಿದ್ದರಾಮಯ್ಯ ಅವರು ಹಣವನ್ನು ಎಲ್ಲಿಂದ ಹೊಂದಿಸುತ್ತಾರೆ ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು. ಮಹಿಳೆಯರು ಖುಷಿಯಿಂದಲೇ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. ಆದರೆ, ಕೆಎಸ್‌ಆರ್‌ಟಿಸಿಗೆ ಆಗುತ್ತಿರುವ ನಷ್ಟವನ್ನು ಯಾವ ರೀತಿ ಭರಿಸುತ್ತಾರೆ ಎಂಬುದನ್ನೂ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ವಿದ್ಯುತ್ ದರ ಏರಿಕೆಗೆ ಬಿಜೆಪಿ ಕಾರಣ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿ ಮಾಡುವಾಗಲೇ ಇದೆಲ್ಲದರ ಮಾಹಿತಿ ಅವರಿಗಿತ್ತು. ಚುನಾವಣೆ ಮುಗಿದು ಒಂದು ತಿಂಗಳಾಗಿದೆ. ಚುನಾವಣೆ ಪ್ರಕ್ರಿಯೆ ಮುಗಿದು ಮೂರು ತಿಂಗಳಾಗಿದೆ. ಬೆಲೆ ಏರಿಕೆ ಬಗ್ಗೆ ತಿಳಿದೇ ಘೋಷಣೆ ಮಾಡಿದ್ದಾರೆ. ಚುನಾವಣೆ ಅನಂತರ ಇದೆಲ್ಲವನ್ನು ಬಿಜೆಪಿ ಮೇಲೆ ಹಾಕಿ ಕೈ ತೊಳೆದುಕೊಳ್ಳಬಹುದು ಎಂದುಕೊಂಡಿದ್ದರೆ ಅದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದರು.