ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರು ಸೇಫ್ ; ಸಿಕ್ಕಿತು ಮೊದಲ ವಿಡಿಯೋ ದೃಶ್ಯ
ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿ (Uttarkashi tunnel) ಕುಸಿದ ಸಿಲ್ಕ್ಯಾರಾ ಸುರಂಗದೊಳಗೆ (Tunnel Collapse) ಸಿಲುಕಿರುವ 40 ಕಾರ್ಮಿಕರ ಮೊದಲ ವಿಡಿಯೋ ಫೂಟೇಜ್ ಲಭ್ಯವಾಗಿದೆ. ನಲುವತ್ತೂ ಕಾರ್ಮಿಕರು ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ (rescue operation) ವೇಗ ಪಡೆದುಕೊಂಡಿದೆ.
ಸುರಂಗದೊಳಗಿನ ವಿಡಿಯೋ ದೃಶ್ಯಗಳು ಮಂಗಳವಾರ ಬೆಳಗ್ಗೆ ಹೊರಬಿದ್ದಿವೆ. ತುರ್ತು ಕಾರ್ಯಾಚರಣಾ ಪಡೆ ಕುಸಿದ ಸಿಲ್ಕ್ಯಾರಾ ಸುರಂಗದ ಮಣ್ಣಿನ ಮೂಲಕ ಆರು ಇಂಚಿನ ಅಗಲದ ಒಂದು ಪೈಪ್‌ಲೈನ್ ಅನ್ನು ಎರಡು ದಿನಗಳ ಹಿಂದೆ ಒಳತಳ್ಳಿತ್ತು. ಇದು ಒಳಗೆ ಸಿಲುಕಿರುವ 40 ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದ ಆಹಾರವನ್ನು ಪೂರೈಸಲು ಸಹಾಯ ಮಾಡಿತ್ತು. ಒಂಬತ್ತು ದಿನಗಳಿಂದ ಕಾರ್ಮಿಕರು ಒಳಗೆ ಸಿಲುಕಿದ್ದಾರೆ.
ಆರು ಇಂಚಿನ ಆಹಾರ ಪೈಪ್‌ಲೈನ್ ಮೂಲಕ ಕಳುಹಿಸಲಾದ ಎಂಡೋಸ್ಕೋಪಿಕ್ ಕ್ಯಾಮೆರಾವನ್ನು ಬಳಸಿಕೊಂಡು ಒಳಗಿನ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ವೀಡಿಯೊದಲ್ಲಿ, ಕಾರ್ಮಿಕರು ಹಳದಿ ಮತ್ತು ಬಿಳಿ ಹೆಲ್ಮೆಟ್‌ಗಳನ್ನು ಧರಿಸಿ ಪೈಪ್‌ಲೈನ್ ಮೂಲಕ ಕಳುಹಿಸಲಾದ ಆಹಾರ ಪದಾರ್ಥಗಳನ್ನು ಸ್ವೀಕರಿಸಿ ಪರಸ್ಪರ ಮಾತನಾಡುತ್ತಿರುವುದು ಕಂಡುಬರುತ್ತಿದೆ. ಇದು ಈ ಕಾರ್ಮಿಕರ ಕುಟುಂಬಗಳಿಗೆ ದೊಡ್ಡ ರಿಲೀಫ್ ನೀಡಿದೆ.
VIDEO | First visuals of workers stuck inside the collapsed Silkyara tunnel in #Uttarkashi, Uttarakhand.
— Press Trust of India (@PTI_News) November 21, 2023
Rescuers on Monday pushed a six-inch-wide pipeline through the rubble of the collapsed tunnel allowing supply of larger quantities of food and live visuals of the 41 workers… pic.twitter.com/mAFYO1oZwv
ಇಲ್ಲಿಯವರೆಗೆ, ಉತ್ತರಾಖಂಡದ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಕುಸಿದ ಭಾಗದ ಅವಶೇಷಗಳ ನಡುವೆ ಇರುವ ಸುರಂಗದ ಭಾಗಕ್ಕೆ ಆಕ್ಸಿಜನ್, ಒಣ ಹಣ್ಣುಗಳು ಮತ್ತು ಔಷಧಿಗಳಂತಹ ವಸ್ತುಗಳನ್ನು ಸರಬರಾಜು ಮಾಡಲು ನಾಲ್ಕು ಇಂಚಿನ ಈಗಾಗಲೇ ಅಸ್ತಿತ್ವದಲ್ಲಿರುವ ಟ್ಯೂಬ್ ಅನ್ನು ಬಳಸಲಾಗುತ್ತಿತ್ತು.
ಇದುವರೆಗಿನ ಕಾರ್ಯಾಚರಣೆಯಲ್ಲಿ ಇದು ಮೊದಲ ಪ್ರಗತಿʼʼ ಎಂದು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ನಿರ್ದೇಶಕ ಅಂಶು ಮನೀಶ್ ಖಲ್ಖೋ ಹೇಳಿದ್ದಾರೆ. “ನಾವು 53 ಮೀಟರ್ ಉದ್ದದಷ್ಟು ಪೈಪ್ ಅನ್ನು ಅವಶೇಷಗಳ ಇನ್ನೊಂದು ಬದಿಗೆ ಕಳುಹಿಸಿದ್ದೇವೆ. ಸಿಲುಕಿರುವ ಕಾರ್ಮಿಕರನ್ನು ಈಗ ನಾವು ಸುಲಭವಾಗಿ ಸಂಪರ್ಕಿಸಬಹುದು. ಇದು ಮೊದಲ ದೊಡ್ಡ ಸಾಧನೆ. ಮುಂದಿನ ಹಂತವು ಹೆಚ್ಚು ಮಹತ್ವದ್ದಾಗಿದೆ ಮತ್ತು ಅತ್ಯಂತ ಮುಖ್ಯವಾಗಿದೆ, ಅದು ಅವರನ್ನು ಹಾಗೇ ಹೊರತರುವುದು” ಎಂದು ಅವರ ಸಂಸ್ಥೆಯ ಇನ್ನೊಬ್ಬ ಕರ್ನಲ್ ದೀಪಕ್ ಪಾಟೀಲ್ ಹೇಳಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದ ಡ್ರೋನ್‌ಗಳು ಮತ್ತು ರೋಬೋಟ್‌ಗಳನ್ನು ಸಹ ಸ್ಥಳಕ್ಕೆ ತರಲಾಗಿದ್ದು, ಸಿಕ್ಕಿಬಿದ್ದಿರುವವರು ಪಾರಾಗಬಹುದಾದ ಇತರ ಮಾರ್ಗಗಳ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ. ಈ ವಾರದ ಆರಂಭದಲ್ಲಿ ಹೆವಿ ಡ್ಯೂಟಿ ಆಗರ್ ಯಂತ್ರದ ಕೆಲಸಕ್ಕೆ ಭಾರಿ ಬಂಡೆಯೊಂದು ಅಡ್ಡ ಬಂತು. ನಂತರ ಕಾರ್ಯಾಚರಣೆ ನಿಲ್ಲಿಸಲಾಗಿದ್ದು, ಇದು ಸಂಜೆ ಕೆಲಸ ಮತ್ತೆ ಪ್ರಾರಂಭವಾಗಲಿದೆ.
ಇದೀಗ ಸುರಂಗದ ಮೇಲಿನ ಬೆಟ್ಟದ ತುದಿಯಿಂದ ಕೊರೆಯುವ ಮೂಲಕ ಲಂಬವಾದ ಪಾರುಗಾಣಿಕಾ ಶಾಫ್ಟ್ ನಿರ್ಮಾಣಕ್ಕಾಗಿ ಮೊದಲ ಯಂತ್ರ ಆಗಮಿಸಿದೆ. ಬಹುಶಃ ಇದು ಸುಮಾರು 80 ಮೀಟರ್ ಆಳದ ತೂತನ್ನು ಕೊರೆಯಲಿದೆ. ಬೆಟ್ಟದ ತುದಿಗೆ ರಸ್ತೆಯನ್ನು ಹಾಕಲಾಗಿದ್ದು, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಹೆಚ್ಚಿನ ಉಪಕರಣಗಳಿಗೆ ವ್ಯವಸ್ಥೆ ಮಾಡುತ್ತಿದೆ. ಸುರಂಗದ ಇನ್ನೊಂದು ಬದಿಯಿಂದ ಬಾರ್ಕೋಟ್ ಅಂತ್ಯದಿಂದ ಕೊರೆಯುವ ಕೆಲಸ ಪ್ರಾರಂಭವಾಗಿದೆ.
ಅಂತರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಸಹ ರಕ್ಷಣಾ ಪ್ರಯತ್ನಗಳನ್ನು ಪರಿಶೀಲಿಸಲು ವಿಪತ್ತು ಸ್ಥಳಕ್ಕೆ ತಲುಪಿದರು. ಅವರು ಜಿನೀವಾ ಮೂಲದ ಇಂಟರ್‌ನ್ಯಾಶನಲ್ ಟನೆಲಿಂಗ್ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್ ಅಸೋಸಿಯೇಷನ್‌ನ ಮುಖ್ಯಸ್ಥರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ರಕ್ಷಣಾ ಕಾರ್ಯಾಚರಣೆಯ ಅವಲೋಕನಕ್ಕಾಗಿ ಕರೆ ಮಾಡಿದ ದಿನವೇ ಪೈಪ್‌ಲೈನ್ ಸುರಂಗದೊಳಗೆ ತಲುಪಿದೆ. ಸಿಲುಕಿಕೊಂಡಿರುವ ಕಾರ್ಮಿಕರ ಧೈರ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ಪ್ರಧಾನಿ ಹೇಳಿದ್ದಾರೆ.